ಕಾಂಗ್ರೆಸ್ ದುರಾಡಳಿತ ವಿರುದ್ಧ ಜಾಗೃತಿ
ಕ.ಪ್ರ. ವಾರ್ತೆ, ಶಿವಮೊಗ್ಗ, ಜ.5
ನಾನು ಮಾಜಿ ಮುಖ್ಯಮಂತ್ರಿಯಾಗಿ, ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯದುದ್ದಗಲಕ್ಕೂ ಓಡಾಡುತ್ತೇನೆ. ಬಿಜೆಪಿ ಸಂಘಟಿಸುವ ಜತೆಗೆ ಕಾಂಗ್ರೆಸ್ ದುರಾಡಳಿತದ ವಿರುದ್ಧ ಜನಜಾಗೃತಿ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಆಗಿದ್ದಾಗ ಏನೆಲ್ಲಾ ಸೇವೆ ಮಾಡಿದ್ದೇನೆಯೋ ಅದೇ ರೀತಿ ಮುಂದೆಯೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದ ಜನರ ಆಶೀರ್ವಾದ ಬೇಕು. ಜನರಿಂದ ಸಂಪೂರ್ಣ ಬೆಂಬಲ ನಿರೀಕ್ಷಿಸುತ್ತೇನೆ. ರಾಜ್ಯದಲ್ಲಿ 19- 20ಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲೆ ಗೆಲ್ಲಬೇಕು ಎಂಬ ಸಂಕಲ್ಪದೊಂದಿಗೆ ಚಟುವಟಿಕೆ ಆರಂಭಿಸಿದ್ದೇವೆಂದರು.
ರಾಜ್ಯದ ಎಲ್ಲಾ ವರ್ಗದ ಜನರು- ಹಿರಿಯರ ಅಪೇಕ್ಷೆಯಂತೆ ನಾನು ಕೆಜೆಪಿ ವಿಸರ್ಜಿಸಿ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದೇನೆ. ರಾಜ್ಯದಲ್ಲಿ ಎಲ್ಲೇ ಹೋದರು ಜನರು ಇದನ್ನೇ ಅಪೇಕ್ಷಿಸುತ್ತಿದ್ದರು. ದೇಶ ಸಂಕಟದಲ್ಲಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮತ ವಿಭಜನೆ ಆಗಬಾರದು ಎಂಬುದು ಎಲ್ಲರ ಅಪೇಕ್ಷೆಯಾಗಿತ್ತು. ಈಗಾಗಲೇ ರಾಜ್ಯದಲ್ಲಿ ಮತ ವಿಭಜನೆಯಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಂತೆ, ರಾಷ್ಟ್ರದಲ್ಲಾಗಬಾರದು.
ಈಗಾಗಲೇ ರಾಷ್ಟ್ರಕ್ಕೆ ಒಬ್ಬ ಯೋಗ್ಯರಾದ ಮೋದಿಯವರ ನಾಯಕತ್ವ ಸಿಕ್ಕಿದೆ. ಅವರು ಪ್ರಧಾನಿಯಾಗಬೇಕು. ಅವರಿಗೆ ಬೆಂಬಲ ಸಿಗುವ ದೃಷ್ಟಿಯಿಂದ, ಯಾವುದೇ ಅಪೇಕ್ಷೆ ಪಡದೆ ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದೇನೆ ಎಂದು ಹೇಳಿದರು.
ನೀವು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಇಚ್ಛಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಆಗಬೇಕೆಂಬುದು ಚರ್ಚೆ ಆಗಬೇಕು, ನಂತರವಷ್ಟೇ ತೀರ್ಮಾನ. ಪಕ್ಷದ ತೀರ್ಮಾನದಂತೆ ಮುಂದೆ ಹೋಗುತ್ತೇನೆ ಎಂದರು.
ಕೆಜೆಪಿಯಲ್ಲಿದ್ದ ನನ್ನ ಕಾರ್ಯಕರ್ತರಿಗೆ, ಮುಖಂಡರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸೂಕ್ತ ಸ್ಥಾನಮಾನ ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ ಅವರು, ಕರ್ನಾಟಕ ಜನತಾ ಪಕ್ಷ ವಿಲೀನದಲ್ಲಿ ತೊಡಕಿನ ಕುರಿತಾಗಿ ಪ್ರಶ್ನಿಸಿದಾಗ, ನೀವೆಲ್ಲಾ ವಿದ್ಯಾವಂತರಿದ್ದೀರಿ. ಅವರ್ಯಾರೋ ಅಪಹರಣವಾಗಿದೆ ಎಂದು ದೂರು ಕೊಡುತ್ತಾರೆ, ಎಲ್ಲವೂ ನಿಮಗೂ ಗೊತ್ತಿದೆ, ನಾನು ನಿಮಗೆ ಏನು ಹೇಳಬೇಕು ಎಂದು ಹೊರಟೇ ಬಿಟ್ಟರು.