ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕ್ರಿಯಾಶೀಲ ಕಲಾವಿದರಿಂದ ಕಲೆಯಲ್ಲಿ ಸ್ವರಾಜ್ಯ ಸೃಷ್ಟಿ

Lingaraj Badiger
Updated On : 6 Jan 2014, 10:49 am

ಸಾಗರ: ಕ್ರಿಯಾಶೀಲ ಕಲಾವಿದರುಗಳು ತಮ್ಮತಮ್ಮ ಮಿತಿಯಲ್ಲಿ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತಾದರೆ ಕಲೆಗಳಲ್ಲಿ ಸ್ವರಾಜ್ಯ ಸೃಷ್ಟಿ ಸಾಧ್ಯವಾಗುತ್ತದೆ ಎಂದು ರಂಗಕರ್ಮಿ ಕೆ.ವಿ. ಅಕ್ಷರ ಹೇಳಿದರು.
ಇಲ್ಲಿನ ನಾಟ್ಯ ತರಂಗ ಸಂಸ್ಥೆ ಹಮ್ಮಿಕೊಂಡಿದ್ದ ಸಂಸ್ಕೃತಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷಿಸಲು ಅಸಾಧ್ಯ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಕಲಾವಿದರುಗಳೇ ತಮ್ಮ ವ್ಯಾಪ್ತಿಯೊಳಗೆ ಕೆಲಸ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಪ್ರೇಕ್ಷಕರೂ ಚಿಂತಿಸಲಿ: ಕಲೆ ಬೆಳೆಸುವಲ್ಲಿ ನಮ್ಮ ಜವಾಬ್ದಾರಿ ಏನು ಎನ್ನುವುದರ ಕುರಿತು ಪ್ರೇಕ್ಷಕರೂ ಚಿಂತಿಸುವಂತಾಗಬೇಕು. ಬದಲಾದ ಕಾಲಘಟ್ಟದಲ್ಲಿ ಕಲೆಯ ಮೂಲನೆಲೆ ಉಳಿಸಿಕೊಳ್ಳುತ್ತಾ ಹೊಸ ಆಯಾಮ ನೀಡಿ, ಕಲೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಯುವ ಪೀಳಿಗೆ ಆಸಕ್ತಿ ಬೆಳೆಸಿಕೊಕೊಳ್ಳುವ ರಸಗ್ರಹಣ ಕಾರ್ಯಕ್ರಮ  ಆಗಬೇಕು ಎಂದು ಹೇಳಿದರು.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಾಂಸ್ಕೃತಿಕ ಸಂಘಟನೆಗಳನ್ನು ಹುಟ್ಟು ಹಾಕುವುದು, ಸಾಂಸ್ಕೃತಿಕ  ಕಾರ್ಯಕ್ರಮ ನಡೆಸುವುದು ಸುಲಭದ ಕೆಲಸವಾಗಬಹುದು. ಆದರೆ ಸಣ್ಣಪುಟ್ಟ ಊರುಗಳಲ್ಲಿ ಸ್ಥಳೀಯ ಕಲಾವಿದರುಗಳೆ ಕಟ್ಟಿಕೊಳ್ಳುವ ಸಂಘಟನೆಗಳು ಮಾಡುವ ಕೆಲಸ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಸ್ಥಳೀಯ ಸಂಘಟನೆಗಳೆ ಕಲಾಜಗತ್ತನ್ನು ನಿಜವಾಗಿ ಉಳಿಸಿ ಬೆಳೆಸಬಲ್ಲದು.
ಸ್ಥಳೀಯ ಸಂಘಟನೆಗಳು ಸ್ಥಳೀಯ ಕಲಾವಿದರಿಗೆ ವೇದಿಕೆ ಒದಗಿಸಿಕೊಡುವ ಮೂಲಕ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಚಂದ್ರನ ಬೆಳಕು: ಬೆಂಗಳೂರಿನ ಅನನ್ಯ ಸಂಸ್ಥೆ ಮುಖ್ಯಸ್ಥ ಡಾ. ರಾಘವೇಂದ್ರ ರಾವ್ ಮಾತನಾಡಿ, ಒಬ್ಬ ಸೂರ್ಯನ ಜೊತೆಗೆ ಹಲವು ಚಂದ್ರನ ಬೆಳಕುಬೇಕು. ಹಾಗೆಯೇ ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗೆ ಸ್ಥಳೀಯ ಸಂಘಟನೆಗಳ ಪ್ರಸ್ತುತತೆ ಹೆಚ್ಚಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಸಂಘಟನೆಯನ್ನು ಹುಟ್ಟು ಹಾಕುವುದು ಸುಲಭ. ಆದರೆ ಬೆಳೆಸಿ ಪೋಷಿಸುವ ಕೆಲಸ ಕಷ್ಟಸಾಧ್ಯ. ಈ ದಿಸೆಯಲ್ಲಿ ಸಾಗರ ಸಂಸ್ಕೃತಿಯ ನೆಲೆಬೀಡಾಗಿದ್ದು, ಇಲ್ಲಿ ಹಲವಾರು ಸಾಂಸ್ಕೃತಿಕ ಸಂಘಟನೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಾಟ್ಯ ತರಂಗ ಟ್ರಸ್ಟಿನ ಐ.ವಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಚಂದನ ಸ್ವಗತಿಸಿದರು. ಜಿ.ಬಿ. ಜನಾರ್ದನ್ ವಂದಿಸಿದರು. ವಸುಧ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement