ಕ್ರೈಸ್ತರಿಂದಲೂ ಕನ್ನಡ ಕಟ್ಟುವ ಕೆಲಸ: ರಾಜ್
ಸಾಗರ: ಕ್ರೈಸ್ತರು ಕನ್ನಡದ ಮುಖ್ಯವಾಹಿನಿಗೆ ಸೇರುವಂತಾಗಬೇಕು. ಮಾತೃಭಾಷೆ ಯಾವುದೇ ಇದ್ದರೂ, ಚರ್ಚ್ನಲ್ಲಿ ನಡೆಯುವ ಪ್ರಾರ್ಥನೆ ಕನ್ನಡದಲ್ಲಿ ಇರಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ಹೇಳಿದರು.
80ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ನಾ.ಡಿಸೋಜ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಭಾನುವಾರ ಅವರ ಸ್ವಗೃಹದಲ್ಲಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಹಾಗೂ ಬೆಂಗಳೂರು ಕನ್ನಡ ಕ್ಯಾಥೋಲಿಕ್ ಧರ್ಮಗುರುಗಳ ಬಳಗದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಕನ್ನಡ ಕಟ್ಟುವ ಕೆಲಸ: ರಾಜ್ಯದಲ್ಲಿ ಕ್ರೈಸ್ತ ಸಮಾಜದವರು ಅಲ್ಪಸಂಖ್ಯಾತರಾಗಿದ್ದರೂ, ಸಾಹಿತ್ಯ, ಸಂಗೀತ ಇನ್ನಿತರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಡಾ.ನಾ. ಡಿಸೋಜ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಕ್ರೈಸ್ತ ಜನಾಂಗಕ್ಕೆ ಸಾಹಿತ್ಯ ಪರಿಷತ್ ಮಾನ್ಯತೆ ನೀಡಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ನಾ.ಡಿಸೋಜ ಕನ್ನಡಕ್ಕಾಗಿ ಕ್ರೈಸ್ತ ಮಿಷನರಿಗಳು ಸಾಕಷ್ಟು ಹೋರಾಟ ನಡೆಸಿವೆ. ಸ್ವಾತಂತ್ರ್ಯ ನಂತರ ಕ್ರೈಸ್ತ ಸಮುದಾಯ ಕನ್ನಡದಿಂದ ದೂರವೇ ಉಳಿದು ಬಿಟ್ಟಿದೆ. ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಾಡುನುಡಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರೈಸ್ತರು ಮುಂದಾಗಬೇಕು. ಇಗರ್ಜಿಗಳಲ್ಲಿ ನಡೆಯುವ ಪ್ರಾರ್ಥನೆಗಳಲ್ಲಿ ಕನ್ನಡದಲ್ಲಿ ಪ್ರಥಮ ಪ್ರಾರ್ಥನೆ ಮಾಡುವಂತೆ ಆಗಬೇಕು ಎಂದರು.
ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಜೆ.ಆರ್. ಫೆರೇರಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಂತೋಣಿ ಪ್ರಸಾದ್ ಕುಮಾರ್, ರಾಜಪ್ಪ, ಲೇಖಕ ವಿಲಿಯಂ ಇದ್ದರು.