ಕೆಲಸ ನಿಲ್ಲಿಸಿ ಹಮಾಲರ ಪ್ರತಿಭಟನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.6
ಅನ್ನಭಾಗ್ಯ ಕಾರ್ಮಿಕರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಕೆಎಫ್‌ಸಿ ಗೋದಾಮಿನ ಹಮಾಲರು ಸೋಮವಾರ ಲೋಡಿಂಗ್- ಅನ್‌ಲೋಡಿಂಗ್ ಕೆಲಸ ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ ತಳಮಟ್ಟದಲ್ಲಿ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಅನ್ನಭಾಗ್ಯ ಯೋಜನೆಗಾಗಿ ಬೆನ್ನು ಮೂಳೆ ಮುರಿದುಕೊಂಡು ದುಡಿಯುತ್ತಿರುವ ಹತ್ತಾರು ಸಾವಿರ ಹಮಾಲಿ ಕಾರ್ಮಿಕರಿದ್ದಾರೆ.
ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಂಎಸ್ ಗೋದಾಮುಗಳಲ್ಲಿನ ಕಾರ್ಮಿಕರು ಹಲವಾರು ಸಮಸ್ಯೆಗಳಲ್ಲಿದ್ದಾರೆ. 30 ವರ್ಷವಾದರೂ ಒಂದೇ ಒಂದು ಕಾರ್ಮಿಕ ಕಾನೂನು ಜಾರಿಯಾಗಿಲ್ಲ ಎಂದು ಹಮಾಲರು ಬೇಸರ ವ್ಯಕ್ತಪಡಿಸಿದರು.
ಬರೀ ಭರವಸೆ: ಈ ವಿಚಾರವಾಗಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದಾಗ ಸಚಿವ ದಿನೇಶ್ ಗುಂಡೂರಾವ್ ಅವರು ಖುದ್ದು ಮನವಿ ಸ್ವೀಕರಿಸಿ, ಬೇಡಿಕೆ ಈಡೇರಿಕೆಯ ಭರವಸೆ ನೀಡಿದ್ದರು.
ನಂತರ ಸಭೆ ಕರೆದು ಚರ್ಚಿಸಿದ್ದರು. ಆದರೆ, ನಾಲ್ಕು ತಿಂಗಳು ಕಳೆದರೂ ಯಾವುದೇ ಒಂದು ನಿರ್ಣಯ ಸಹ ಜಾರಿಗೆ ಬಂದಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.
ಕಾರ್ಮಿಕರಿಗೆ ಬೆದರಿಕೆ: ಪಡಿತರ ವಿತರಕರು ಮತ್ತು ರೈಸ್‌ಮಿಲ್ ಮಾಲೀಕರು ಒತ್ತಡ ಹಾಕಿದಾಗ ಮಣಿಯುವ ಆಡಳಿತ ಯಂತ್ರ ಬಡ ಕಾರ್ಮಿಕರ ಮೇಲೆ ಮಾತ್ರ ಬೆದರಿಸುವ ತಂತ್ರ ಅನುಸರಿಸುತ್ತದೆ. ಅದರ ಅರ್ಥ ಬಡವರ ದನಿಯನ್ನು ಬಗ್ಗು ಬಡಿದು ಉಳ್ಳವರ ಪರ ನಿಲ್ಲುವುದೇ ಆಗಿರುತ್ತದೆ. ಕೂಡಲೇ ಮುಖ್ಯಮಂತ್ರಿಯವರು ಇತ್ತ ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಬೋರೇಗೌಡ, ಪುಟ್ಟಸ್ವಾಮಿ, ರವಿ, ಅನಿಲ್ ಕುಮಾರ್ ಮೊದಲಾದವರು ಇದ್ದರು.