'ಗೋಪಾಲಗೌಡ ವೃತ್ತ' ನಾಮಕರಣ ಮಾಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.6
ನಗರದ ಎಂಆರ್‌ಎಸ್ ವೃತ್ತಕ್ಕೆ ಶಾಂತವೇರಿ ಗೋಪಾಲಗೌಡ ವೃತ್ತವೆಂದು ಅಧಿಕೃತವಾಗಿ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ನಗರಸಭೆಯನ್ನು ಆಗ್ರಹಿಸಿದೆ.
ಸೋಮವಾರ ನಗರಸಭೆ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಗೋಪಾಲಗೌಡರ ಪ್ರಾಮಾಣಿಕ ಹೋರಾಟಗಳನ್ನು ಜನತೆ ಎಂದಿಗೂ ಮರೆಯುವುದಿಲ್ಲ. ಗೇಣಿ ಪದ್ಧತಿ ಹಾಗೂ ಭೂ ಮಾಲಿಕರ ದಬ್ಬಾಳಿಕೆ ವಿರುದ್ಧ ಹೋರಾಡುತ್ತಾ ಕಾಗೋಡು ಚಳುವಳಿಯ ನೇತೃತ್ವ ವಹಿಸಿ, ಊಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತರಲು ಕಾರಣಕರ್ತರು ಹಾಗೂ ಏಕೀಕರಣ ಹೋರಾಟದಲ್ಲೂ ಸಕ್ರಿಯವಾಗಿ ಹೋರಾಡಿದವರು. ಮೂರು ಬಾರಿ ಶಿವಮೊಗ್ಗ ಶಾಸಕರಾಗಿ ಆಯ್ಕೆಯಾದವರು. ತಮ್ಮ ಕೊನೆ ೆಗಳಿಗೆವರೆಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದವರು. ಅಂತಹವರ ಹೆಸರು ಚಿರಸ್ಥಾಯಿಯಾಗಿ ಉಳಿಸಬೇಕಾಗಿದೆ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಈಡೇರದ ಬೇಡಿಕೆ: ಎಂಆರ್‌ಎಸ್ ವೃತ್ತಕ್ಕೆ ಶಾಂತವೇರಿ ಗೋಪಾಲಗೌಡ ವೃತ್ತವೆಂದು ನಾಮಕರಣ ಮಾಡಬೇಕು. ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪಿಸಬೇಕು, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ನೀಡಬೇಕು, ಶಾಲಾ ಪಠ್ಯದಲ್ಲಿ ಗೋಪಾಲಗೌಡರ ವಿಚಾರಧಾರೆ ಅಳವಡಿಸಬೇಕು ಎಂದು ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಪ್ರತಿಭಟನೆ ಹಾದಿ ಹಿಡಿದಿದ್ದಾಗಿ ಮುಖಂಡರು ತಿಳಿಸಿದರು.
ಗೋ.ರಮೇಶಗೌಡ, ಮಂಜುನಾಥ, ನರಸಿಂಹ, ರಾಜುನಾಯ್ಕ, ಸಂತೋಷ್, ಮಧು, ರಘು, ರವಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.