ಚಂದ್ರಗುತ್ತಿಗೆ ಸೌಕರ್ಯ ಕಲ್ಪಿಸಲು ಚರ್ಚೆ
ಸೊರಬ: ತಾಲೂಕು ಪ್ರಮುಖ ಹೋಬಳಿ ಕೇಂದ್ರ ಚಂದ್ರಗುತ್ತಿ ಗ್ರಾಮದ ಮೂಲಭೂತ ಸಮಸ್ಯೆಗಳ ನಿವಾರಣೆ ಕುರಿತಂತೆ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವರದಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನವರು ತಾಲೂಕು ಆಡಳಿತದೊಂದಿಗೆ ಚರ್ಚಿಸಿದ್ದಾರೆ.
ಭಗ್ನಗೊಂಡ ಅಲ್ಲಿನ ಕೋಟೆಯೊಳಗಿದ್ದ ದುರ್ಗಾ ವಿಗ್ರಹದ ಮರುಸ್ಥಾಪನೆ, ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕುರಿತು, ಪ್ರತಿ ಮಂಗಳವಾರ, ಶುಕ್ರವಾರ, ವಿಶೇಷ ಸಂದರ್ಭದಲ್ಲಿ ಬರುವ ಮಹಿಳಾ ಯಾತ್ರಾರ್ಥ್ಥಿಗಳಿಗೆ ಬಟ್ಟೆ ಬದಲಾಯಿಸಲು ಅಗತ್ಯವಿರುವ ಕೊಠಡಿ ನಿರ್ಮಿಸಿಕೊಡುವಂತೆ ತಹಸೀಲ್ದಾರರಿಗೆ ಮನವಿ ಮಾಡಿದ್ದಾರೆ.
ಫೆ.28ರೊಳಗೆ ಸ್ಥಾಪನೆ: ಮನವಿಗೆ ಸ್ಪಂದಿಸಿರುವ ತಹಸೀಲ್ದಾರರು ಅಧಿಕಾರಿಗಳಿಗೆ ಕೂಡಲೇ ಸ್ಥಳ ವೀಕ್ಷಣೆ ನಡೆಸಿ, ಯೋಜನೆ ರೂಪಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ, ಸ್ಥಳಕ್ಕೆ ತೆರಳಿ ಭಕ್ತರು ಬಟ್ಟೆ ಬದಾಲಾಯಿಸುವ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಸ್ಥಳ ಪರಿಶೀಲನೆ, ಚರ್ಚೆ ನಡೆಸಿದರು. ಭಗ್ನಗೊಂಡಿರುವ ದುರ್ಗಾ ವಿಗ್ರಹದ ನೂತನ ಶಿಲಾಮೂರ್ತಿ ಕೆತ್ತಿಸಿ, ಫೆ.28 ರೊಳಗೆ ಸ್ಥಾಪಿಸುವ ಬಗ್ಗೆ ಯೋಜಿಸಲಾಯಿತು. ಸ್ಥಾಪನೆಗೆ ಪೂರಕವಾಗಿ ಪ್ರಾಚ್ಯವಸ್ತು ಇಲಾಖೆ ಅನುಮತಿ ಪಡೆಯಬೇಕು ಎಂದು ತೀರ್ಮಾನಿಸಲಾಯಿತು.
ಇದೇ ವೇಳೆ ಅಪೂರ್ಣಗೊಂಡ ಇಲ್ಲಿನ ಸಿದ್ದಾಪುರ ರಸ್ತೆ ಬಗ್ಗೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಚರ್ಚೆ ನಡೆಸಿದರು. ಈಗಾಗಲೇ ಗುತ್ತಿಗೆದಾರರಿಗೆ ಷೋಕಾಸ್ ನೋಟಿಸ್ ನೀಡಿ ಗಡುವು ವಿಧಿಸಲಾಗಿದೆ. ಈ ಗಡುವಿನೊಳಗೆ ಕೆಲಸ ಪೂರ್ಣಗೊಳ್ಳದೆ ಇದ್ದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಹೊಸ ಟೆಂಡರ್ ಕರೆಯಲಾಗುತ್ತದೆ ಎಂದರು.
ಸ್ಥಳ ಪರಿಶೀಲನೆ ವೇಳೆ ಕಂದಾಯ ಇಲಾಖೆ ಶಿರಸ್ತೇದಾರ್ ಮಾದಪ್ಪ, ಕಿರಣಕುಮಾರ್, ವೆಂಕಟೇಶ್, ರತ್ನಾಕರ, ಲೋಕೋಪಯೋಗಿ ಇಲಾಖೆ ಅಧಿಕಾರಿ ರಾಮಚಂದ್ರಪ್ಪ, ಕರವೇ ಘಟಕದ ಅಧ್ಯಕ್ಷ ಪ್ರಸನ್ನಶೇಟ್, ದಿನೇಶ್, ಪ್ರಶಾಂತ್ ಜೆ. ನಾಯ್ಕ, ಹೇಮಂತ್ ಸಂಭಾಪುರ ಇದ್ದರು.