ಬತ್ತದ ಮೂಟೆ ತೆರವಿಗೆ ಡಿಸಿ ಸೂಚನೆ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಜ.6
ಎಪಿಎಂಸಿ ಆವರಣದಲ್ಲಿ ಇರುವಂತಹ ಬತ್ತದ ಮೂಟೆಗಳನ್ನು ಮಂಗಳವಾರ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ವಿಫುಲ್ಕುಮಾರ್ ತಿಳಿಸಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ 6000ಕ್ಕೂ ಹೆಚ್ಚು ಖರೀದಿ ಮಾಡಿದ ಬತ್ತದ ಮೂಟೆ ಬಯಲಲ್ಲಿ ಬಿದ್ದಿರುವ ಕುರಿತು ರೈತರು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂಗತಿ ಅರಿತು ಶಿರಾಳಕೊಪ್ಪ ಪಟ್ಟಣಕ್ಕೆ ಎಲ್ಲ ಅಧಿಕಾರಿಗಳೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ ಬಯಲಲ್ಲಿ ಬಿದ್ದಿರುವ ಬತ್ತದ ಮೂಟೆಗಳನ್ನು ತಕ್ಷಣ ತೆರೆವುಗೊಳಿಸಬೇಕು ಹಾಗೆಯೇ ರೈತರಿಗೆ ತಿಂಗಳುಗಳ ದಿನಾಂಕವನ್ನು ತಹಸೀಲ್ದಾರ್ ಅವರು ಪರಿಶೀಲಿಸಿ ವರದಿ ಮಾಡುವಂತೆ ಆಜ್ಞಾಪಿಸಿದರು.
ಶಿರಾಳಕೊಪ್ಪದಲ್ಲಿ ಬತ್ತ ಖರೀದಿ ಕೇಂದ್ರದ ಸಂಪೂರ್ಣ ಮಾಹಿತಿ ಪಡೆದ ಜಿಲ್ಲಾಧಿಕಾರಿ ಖರೀದಿ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಲ್ಲಿಯ ಸಮಸ್ಯೆಗಳನ್ನು ತಕ್ಷಣ ತಮ್ಮ ಗಮನಕ್ಕೆ ತಂದಲ್ಲಿ ಬಗೆಹರಿಸಿಕೊಡುವುದಾಗಿ ತಿಳಿಸಿದರು.
ಕಳೆದ ತಿಂಗಳ 20ರ ನಂತರದ ರೈತರಿಗೆ ಹಣವಿಲ್ಲ: ರೈತರು ಖರೀದಿ ಕೇಂದ್ರಕ್ಕೆ ಧಾನ್ಯ ಹಾಕುವಾಗ ಒಂದು ವಾರದಲ್ಲಿ ಬತ್ತ ಜೋಳದ ಹಣವನ್ನು ಪಾವತಿಸುವುದಾಗಿ ತಿಳಿಸಿದ್ದೀರಿ. ಆದರೆ, ಕಳೆದ 15-20 ದಿನಗಳಿಂದ ಹಣ ಸಂದಾಯವಾಗಿಲ್ಲ ಎಂದಾಗ ತಾವು ಮೊದಲು 7 ದಿನದಲ್ಲಿಯೇ ಹಣ ಕೊಡುವುದಾಗಿ ತಿಳಿಸಿದ್ದೆವು. ಆದರೆ ಹಣವಿದ್ದರೂ ಏಕೆ ತಡವಾಗುತ್ತಿದೆ ಎಂದು ತಮ್ಮ ಜೊತೆ ಬಂದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಹಣವನ್ನು ನಾಳೆಯೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ವ್ಯಾಪಾರಿಗಳ ಲಾರಿ ಸೀಜ್ ಮಾಡಿ: ವ್ಯಾಪಾರಿಗಳು ಮೋಸ ಮಾಡಿ ಖರೀದಿ ಕೇಂದ್ರಕ್ಕೆ ಬತ್ತ ತರಲು ಪ್ರಯತ್ನಿಸುವ ಸಂಗತಿ ತಿಳಿದರೆ ಅಂತಹ ಲಾರಿಗಳನ್ನು ತಕ್ಷಣ ಸೀಜ್ ಮಾಡಿ ಎಂದು ತಹಸೀಲ್ದಾರ್ ಧರ್ಮೋಜಿರಾವ್ ಅವರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಅವರೊಂದಿಗೆ ಸಾಗಣೆದಾರ ವೈ.ಎಸ್. ನಾಗರಾಜ್, ತಹಸೀಲ್ದಾರ್ ಧರ್ಮೋಜಿರಾವ್, ಎಪಿಎಂಸಿ ನೂತನ ಅಧ್ಯಕ್ಷ ಕೊರಟಿಗೆರೆ ಚಂದ್ರಶೇಖರಪ್ಪ, ಜಿಪಂ ಸದಸ್ಯರಾದ ಜಿಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ದಾನಿ ರುದ್ರಪ್ಪ, ಮಲ್ಲೇನಹಳ್ಳಿ ಈಶ್ವರಪ್ಪ, ಕೃಷಿ ಇಲಾಖೆಯ ಪ್ರಭಾಕರ್, ಆಹಾರ ಇಲಾಖೆಯ ಅಧಿಕಾರಿಗಳು ಉಪತಹಸೀಲ್ದಾರ್ ಇತರ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ, ನೂರಾರು ರೈತರು ಹಾಜರಿದ್ದು, ಸಮಸ್ಯೆ ಬಗ್ಗೆ ಚರ್ಚಿಸಿದರು.