ಬಿಎಸ್ವೈಗೇ ಟಿಕೆಟ್
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.6
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ಹಿರಿಯ ಮುಖಂಡರು ಆಸಕ್ತಿ ತೋರಿಸಿದ್ದು, ಇದಕ್ಕೆ ಬಿಎಸ್ವೈ ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಪಕ್ಷದ ತೀರ್ಮಾನದಂತೆ ನಡೆಯುತ್ತೇನೆ ಎಂದು ಹೇಳಿದ್ದ ಯಡಿಯೂರಪ್ಪ, ರಾತ್ರಿ ಪಕ್ಷದ ಹಿರಿಯ ಮುಖಂಡರೊಬ್ಬರ ಮನೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮುಖಂಡರ ಒತ್ತಾಸೆಗೆ ಅಸ್ತು ಎಂದಿದ್ದಾರೆ.
ಪ್ರಸ್ತಾವನೆ ಬದಲು: ತಿಂಗಳ ಹಿಂದೆ ನಡೆದ ಬೆಳವಣಿಗೆಯಲ್ಲಿ ಜಿಲ್ಲಾ ಬಿಜೆಪಿಯೂ ಪಕ್ಷದ ರಾಜ್ಯ ಘಟಕಕ್ಕೆ ನಾಲ್ವರ ಹೆಸರನ್ನು ಪ್ರಸ್ತಾಪಿಸಿತ್ತು. ಅದರಲ್ಲಿ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್, ಎಂ.ಬಿ.ಭಾನುಪ್ರಕಾಶ್, ಆರಗ ಜ್ಞಾನೇಂದ್ರ ಹೆಸರಿತ್ತು. ಆ ಸಂದರ್ಭ ಸಹ ಮುಂದೆ ಈ 4 ಹೆಸರಿನೊಂದಿಗೆ ಬೇರೆ ಹೆಸರು ಸೇರಿದರೂ ಸೇರಬಹುದೆಂದು ಬಿಜೆಪಿ ಮುಖಂಡರು ಹೇಳಿದ್ದರು.
ಇನ್ನೊಂದೆಡೆ ತಾವೇ ಅಭ್ಯರ್ಥಿ ಎಂದು ಹಾಲಿ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕರ್ತರು, ಮುಖಂಡರ ಬಳಿ ಹೇಳಿಕೊಂಡಿದ್ದರು. ಆದರೆ ಭಾನುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ಬಿ.ವೈ. ರಾಘವೇಂದ್ರ ಬದಲು, ಬಿ.ಎಸ್.ಯಡಿಯೂರಪ್ಪ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ.
ಒತ್ತಡ: ಬಿಜೆಪಿಯ ಜಿಲ್ಲಾಧ್ಯಕ್ಷರು, ರಾಜ್ಯ ಉಪಾಧ್ಯಕ್ಷರು, ಮಾಜಿ ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಸೇರಿ ಬಿ.ಎಸ್. ಯಡಿಯೂರಪ್ಪನವರಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ.
ಆರಂಭದಲ್ಲಿ ಈ ಪ್ರಸ್ತಾವ ತಿರಸ್ಕರಿಸಿದ ಯಡಿಯೂರಪ್ಪ, ತಾವು ಕಣಕ್ಕಳಿಯುವುದಿಲ್ಲ. ಬದಲಿಗೆ ರಾಜ್ಯಾದ್ಯಂತ ಕಾರ್ಯಕರ್ತನಂತೆ ಓಡಾಡಿ ಪಕ್ಷ ಸಂಘಟಿಸುತ್ತೇನೆ. ಶಿವಮೊಗ್ಗದಲ್ಲಿ ಕಣಕ್ಕಿಳಿದರೆ, ರಾಜ್ಯಾದ್ಯಂತ ಓಡಾಡಲು ಕಷ್ಟವಾಗಬಹುದು ಎಂದು ಹೇಳಿಕೊಂಡಿದ್ದಾರೆ.
ಆದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿವೈಆರ್ ಬದಲು ತಾವು ಏಕೆ ಎಂಬುದನ್ನು ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಸೇರಿದಂತೆ ರಾಜ್ಯದ ಜವಾಬ್ದಾರಿ ತೆಗೆದುಕೊಂಡೆ ಮತ್ತಷ್ಟು ಪ್ರಭಾವವಿರುತ್ತದೆ ಎಂದು ಮುಖಂಡರು ಮನವರಿಕೆ ಮಾಡಿಕಟ್ಟ ಹಿನ್ನೆಲೆಯಲ್ಲಿ ಬಿಎಸ್ವೈ ಕೂಡ ತಮ್ಮ ನಿಲುವು ಬದಲಿಸಿದರು ಎನ್ನಲಾಗಿದೆ.
ರಾಘವೇಂದ್ರ ಏಕೆ ಬೇಡ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಅವರನ್ನು ಕಣಕ್ಕಿಳಿಸುವುದಿಲ್ಲ, ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿಕೊಂಡಿದ್ದ ಯಡಿಯೂರಪ್ಪ ಕೊನೆ ಕ್ಷಣದಲ್ಲಿ ತಮ್ಮ ಪುತ್ರನನ್ನೇ ಸ್ಪರ್ಧೆಗೊಡ್ಡಿಸಿ ಗೆಲ್ಲಿಸಿಕೊಂಡಿದ್ದರು.
ಆದರೆ, ನಂತರ ನಡೆದ ಬೆಳವಣಿಗೆಯಲ್ಲಿ ರಾಘವೇಂದ್ರ ಬಿಜೆಪಿ ಕಾರ್ಯಕರ್ತರು, ಮುಖಂಡರಿಂದ ದೂರು ಉಳಿದಿದ್ದು, ಅವರ ವರ್ಚಸ್ಸು ಪಕ್ಷದ ವಲಯದಲ್ಲೇ ಕಡಿಮೆಯಾಗಿದೆ. ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನೇ ಮತ್ತೆ ಕಣಕ್ಕಿಳಿಸಿದರೆ ಶಿವಮೊಗ್ಗ ಸೀಟು ಗೆಲ್ಲಲು ಸಾಹಸ ಪಡಬೇಕಾಗುತ್ತದೆ ಎಂಬುದು ಪಕ್ಷದ ಹಿರಿಯ ಮುಖಂಡರ ವಿಶ್ಲೇಷಣೆ. ಈ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಕಣಕ್ಕಿಳಿಸಿದರೆ ಗೆಲುವು ಸುಲಭ ಎಂಬುದು ನಾಯಕರ ಲೆಕ್ಕಾಚಾರ.
ಶೀಘ್ರ ಘೋಷಣೆ: ಜನವರಿ 9ರಂದು ಬಿಎಸ್ ಯಡಿಯೂರಪ್ಪ ಅಧಿಕೃತವಾಗಿ ಪಕ್ಷದೊಳಗೆ ಬರುತ್ತಿದ್ದಾರೆ. ಬಿಜೆಪಿ ಕಚೇರಿಯನ್ನು ಪ್ರವೇಶಿಸುತ್ತಿದ್ದಾರೆ. ನಂತರ ಯಡಿಯೂರಪ್ಪ ಹೆಸರನ್ನು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ವೇದಿಕೆ ಸೃಷ್ಟಿಸಲು ಬಿಜೆಪಿ ಸಂಕಲ್ಪಿಸಿದೆ.
ಚುನಾವಣೆಗೆ ಇನ್ನು 100 ದಿನಗಳು ಬಾಕಿ ಇರಬಹುದು. ಈಗಲೇ ಅಭ್ಯರ್ಥಿ ಘೋಷಿಸುವುದರಿಂದ ಪಕ್ಷದಲ್ಲಿ ಚಟುವಟಿಕೆ ಆರಂಭವಾಗುತ್ತದೆ. ಜೊತೆಜೊತೆಗೆ ಯಡಿಯೂರಪ್ಪನವರಿಗೂ ರಾಜ್ಯದ ವಿವಿಧ ಕಡೆಗಳಿಗೆ ಹೋಗಿ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಸಾದ್ಯವಾಗುತ್ತದೆ ಎಂಬುದು ಮುಖಂಡರ ವಿವರಣೆ.
ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮುಂದಿನ ದಿನಗಳಲ್ಲಿ ಸಾಕಷ್ಟು ರಂಗ ಪಡೆದುಕೊಳ್ಳುವ ಎಲ್ಲಾ ಲಕ್ಷಣ ಕಂಡುಬಂದಿದೆ.