ಮೊದಲ ತರಗತಿಯಿಂದಲೇ 'ಶಿಕ್ಷಣ ಹಕ್ಕು'
ಶಿವಮೊಗ್ಗ: ಶಿಕ್ಷಣ ಹಕ್ಕು ಕಾಯ್ದೆಯಲ್ಲಿದ್ದ ಗೊಂದಲವೊಂದನ್ನು ಸರ್ಕಾರ ನಿವಾರಿಸಿದೆ. ಈ ಕಾಯ್ದೆ ಅಡಿಯಲ್ಲಿ ಮಕ್ಕಳಿಗೆ ಪ್ರವೇಶ ನೀಡುವಾಗ 1ನೇ ತರಗತಿಯಿಂದ ಆರಂಭಿಸಬೇಕೋ, ಕಿಂಡರ್ ಗಾರ್ಟನ್ ತರಗತಿಯಿಂದ ಆರಂಭಿಸಬೇಕೋ ಎಂದು ತಿಳಿಯದೇ ಹಲವು ಶಾಲೆಗಳು ಸ್ವಯಂ ನಿರ್ಣಯ ತೆಗೆದುಕೊಂಡಿದ್ದವು. ಈ ವರ್ಷ ಗೊಂದಲ ನಿವಾರಣೆಯಾಗಿದ್ದು, ಶಾಲೆಯಲ್ಲಿ ಮೊದಲ ತರಗತಿ ಯಾವುದೋ ಅಲ್ಲಿಂದಲೇ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶ ನೀಡುವಂತೆ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಅಂದರೆ, ಅನುದಾನರಹಿತ ಪ್ರಾಥಮಿಕ ಶಾಲೆಯಲ್ಲಿ ಯಾವ ತರಗತಿ ಮೊದಲನೆಯೇ ಅದೇ ತರಗತಿಯಿಂದ ಶೇ. 25ರಷ್ಟು ಮಕ್ಕಳಿಗೆ ಪ್ರವೇಶ ನೀಡಲಾಗುವುದು. ನಂತರದ ತರಗತಿಗಳಲ್ಲಿ ಮುಂದುವರಿಯುವರು.
ಎಲ್ಕೆಜಿ ತರಗತಿ ಇದ್ದರೂ ಕಳೆದ ವರ್ಷ 1ನೇ ತರಗತಿಯಿಂದ ಪ್ರವೇಶ ನೀಡಿದ್ದರೆ, ಈ ವರ್ಷದಿಂದ ಅಂತಹ ಶಾಲೆಗಳು ಎಲ್ಕೆಜಿಯಿಂದಲೇ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶ ನೀಡಬಹುದು. ಇದೇ ಜನವರಿ 7ರಿಂದ ಫೆಬ್ರವರಿ 8ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಲಾಟರಿ ಮೂಲಕ: ಪ್ರತಿವರ್ಷದಂತೆ ಈ ಬಾರಿಯೂ ಸಹ ಶೇ. 25ಕ್ಕಿಂತ ಹೆಚ್ಚು ಮಕ್ಕಳ ಅರ್ಜಿಗಳು ಬಂದರೆ ಲಾಟರಿ ಮೂಲಕ ಆಯ್ಕೆ ನಡೆಯುವುದು. ಪರಿಶಿಷ್ಟ ಜಾತಿಗೆ ಶೇ.7.5, ಪರಿಶಿಷ್ಟ ಪಂಗಡಕ್ಕೆ ಶೇ.1.5, ಇತರೆ ವಿಭಾಗಕ್ಕೆ ಶೇ.16ರಷ್ಟು ಸೀಟುಗಳು ಮೀಸಲಾಗಿದೆ. ಇತರೆ ವಿಭಾಗದಲ್ಲಿ ಬಿಪಿಎಲ್ ಕಾರ್ಡುದಾರರು, ಅಂಗವಿಕಲ ಮಕ್ಕಳು, ಎಚ್ಐವಿ ಪೀಡಿತ ಮಕ್ಕಳು, ಬೀದಿ ಮಕ್ಕಳು, ಅನಾಥ ಮಕ್ಕಳು ಸೇರಿದಂತೆ ಶೋಷಿತ ವರ್ಗದವರರು ಅರ್ಜಿ ಸಲ್ಲಿಸಬಹುದು.
1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬದ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಿದ ಮಕ್ಕಳಲ್ಲಿ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ ಮಕ್ಕಳಿಗೆ ಪ್ರವೇಶ ನೀಡಿದ ನಂತರ ಉಳಿಯುವ ಸೀಟುಗಳನ್ನು ಹೆಚ್ಚಿನ ಆದಾಯದ ಕುಟುಂಬದ ಮಕ್ಕಳಿಗೆ ನೀಡಲಾಗುವುದು. ಗರಿಷ್ಠ ಆದಾಯ ಮಿತಿ 3.5 ಲಕ್ಷ. ಯಾವುದೇ ವಿಭಾಗದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ಲಾಟರಿ ಮೂಲಕ ಆಯ್ಕೆ ನಡೆಯುವುದು.
ಒಂದು ಮಗುವಿಗೆ ಶಾಲೆಗೆ ಗರಿಷ್ಠ ವರ್ಷಕ್ಕೆ 12,848 ವರೆಗೆ ಸರ್ಕಾರದಿಂದ ಶುಲ್ಕ ದೊರೆಯುತ್ತದೆ. ಈ ಮೊತ್ತವನ್ನು ಶಾಲೆಯಲ್ಲಿರುವ ಸೌಕರ್ಯ, ಮಕ್ಕಳ ಸಂಖ್ಯೆ ಆಧರಿಸಿ ಇಲಾಖೆ ನಿರ್ಧರಿಸುತ್ತದೆ.
ತರಬೇತಿ: ಹಿಂದಿನ ವರ್ಷ ಆರ್ಟಿಇ ಅಡಿ ನಿಗದಿಪಡಿಸಿದಷ್ಟು ಸೀಟುಗಳು ಭರ್ತಿಯಾಗಿರಲಿಲ್ಲ. ಹಾಗಾಗಿ 2013- 14ನೇ ಸಾಲಿನಲ್ಲಿ ವ್ಯಾಪಕ ತರಬೇತಿ ಕಾರ್ಯಕ್ರಮವನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ.
ಗ್ರಾಪಂ ಸದಸ್ಯರಿಂದ ಹಿಡಿದು ಸಂಸದರವರೆಗೆ ಶಿಕ್ಷಣ ಹಕ್ಕು ಕಾಯ್ದೆಯ ಬಗ್ಗೆ ಅರಿವು ಮೂಡಿಸಲಾಗಿದೆ. ತರಬೇತಿ ನೀಡಲಾಗಿದೆ. ಹಾಗಾಗಿ ಈ ಬಾರಿ ಕಾಯ್ದೆ ಅಡಿಯಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎಂದು ಇಲಾಖೆ ನಿರೀಕ್ಷಿಸಿದೆ.
175 ಕಡೆ ಬೀದಿ ನಾಟಕ: ಸರ್ವ ಶಿಕ್ಷ ಅಭಿಯಾನ ಜಿಲ್ಲಾ ಸಂಯೋಜಕ ಗಣಪತಿ ಈ ಬಗ್ಗೆ ಮಾಹಿತಿ ನೀಡಿ, ಜಿಲ್ಲಾದ್ಯಂತ 175 ಕಡೆ ಬೀದಿ ನಾಟಕ ಪ್ರದರ್ಶಿಸಲಾಗಿದೆ. ಎಲ್ಲಾ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ನೀಡಲಾಗಿದೆ. ಪ್ರಚಾರ ಫಲಕ ಅಳವಡಿಸಲಾಗಿದೆ. ಕಾಯ್ದೆ ಅಡಿ ಪ್ರವೇಶ ಪಡೆಯಲು ಅರ್ಜಿಗಳು ಆಯಾ ಶಾಲೆಗಳಲ್ಲಿಯೂ ಸಿಗುತ್ತದೆ. ಆನ್ಲೈನ್ ಮೂಲಕವೂ ಆರ್ಜಿ ಸಲ್ಲಿಸಬಹುದು ಎಂದು 'ಕನ್ನಡಪ್ರಭ'ಕ್ಕೆ ಹೇಳಿದರು.
-ಹೊನ್ನಾಳಿ ಚಂದ್ರಶೇಖರ್