ಭೂದಾಖಲೆ ನೀಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಿಗನ ಬಂಧನ
ಕ.ಪ್ರ.ವಾರ್ತೆ, ಭದ್ರಾವತಿ, ಜ.7
ಭೂದಾಖಲೆ ಸಿದ್ಧಪಡಿಸಿಕೊಡಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಿಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದಿದೆ.
ಗ್ರಾಮ ಲೆಕ್ಕಿಗ ಎಲ್.ಶ್ರೀನಿವಾಸ್ ಜಮೀನೊಂದಕ್ಕೆ ಸಂಬಂಧಿಸಿದ ಪಹಣಿ ಸಿದ್ಧಪಡಿಸಿಕೊಡಲು ಬುಡನ್‌ಸಾಬ್ ಎಂಬವರನ್ನು ಮೂರು ತಿಂಗಳಿನಿಂದ ಸತಾಯಿಸುತ್ತಿದ್ದು, ದಾಖಲೆ ನೀಡಲು ಮೂರು ಸಾವಿರ ರು. ಲಂಚ ಕೇಳಿದ್ದರು. ಬುಡನ್‌ಸಾಬ್ ಅವರು ಇದನ್ನು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದರು. ಮಂಗಳವಾರ ತಾಲೂಕು ಕಚೇರಿಯಲ್ಲಿ ಶ್ರೀನಿವಾಸ್ ಅವರಿಗೆ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಹಠಾತ್ತನೆ ದಾಳಿ ನಡೆಸಿ ಶ್ರೀನಿವಾಸ್ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ. ಶ್ರೀಧರ್, ಡಿವೈಎಸ್ಪಿ ಎಂ.ಪಿ. ನಾಗರಾಜ್, ಇನ್ಸ್‌ಪೆಕ್ಟರ್ ಕೆ.ಸಿ.ಪುರುಷೋತ್ತಮ್ ಮತ್ತು ಸಿಬ್ಬಂದಿಗಳಾದ ರಮೇಶ್, ಸಂಜೀವ, ಯಶೋದ, ಸುರೇಶ್, ಮಹಂತೇಶ್, ಕೃಷ್ಣಮೂರ್ತಿ ಮತ್ತು ರಾಜಪ್ಪ ದಾಳಿ ನಡೆಸಿದ ತಂಡದಲ್ಲಿದ್ದರು.