ಹಳ್ಳಿಗರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ
ತ್ಯಾಗರ್ತಿ: ಜನಪ್ರತಿನಿಧಿಗಳು ಗ್ರಾಮೀಣ ಜನತೆಯ ಕುಂದುಕೊರತೆಗಳಿಗೆ ಸ್ಪಂದಿಸಿ ಸರ್ಕಾರಿ ಸೌಲಭ್ಯ ದೊರಕಿಸಿಕೊಡಲು ಸಹಕರಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗಾಕಾಂಕ್ಷಿಗಳ ಮಾಹಿತಿ ಮತ್ತು ಸಂವಹನ ಕಾರ್ಯಕ್ರಮದಲ್ಲಿ ಅವರು, ಜನರ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಉದ್ಯೋಗ ಬಯಸಿ ಬಂದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 15 ದಿನಗಳಲ್ಲಿ ಉದ್ಯೋಗ ನೀಡಬೇಕು. ಇಲ್ಲವಾದರೆ ಉದ್ಯೋಗ ಭತ್ಯೆ ನೀಡಬೇಕು ಎಂದರು.
ಭತ್ಯೆ ನೀಡದಿದ್ದರೆ ಕಾನೂನಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರನ್ನು ಕಾರಾಗೃಹಕ್ಕೆ ಕಳುಹಿಸುವ ಅವಕಾಶವಿದೆ. ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಜನರಿಗೆ ಸರಿಯಾಗಿ ಇಲ್ಲದೇ ಇರುವುದು ಯೋಜನೆ ಕುಂಠಿತಗೊಳ್ಳಲು ಕಾರಣವಾಗಿದೆ. ಊರಿಗೊಂದು ಆಟದ ಮೈದಾನ, ಒಕ್ಕಲು ಕಣ, ದನದ ಕೊಟ್ಟಿಗೆ, ಕುರಿ, ಕೋಳಿ ಸಾಕಾಣೆ, ಶೌಚಾಲಯ ನಿರ್ಮಾಣ, ಹೊಲಕ್ಕೊಂದು ರಸ್ತೆಗಳ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿ, ಯೋಜನೆಯ ಸದುಪಯೋಗಕ್ಕೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಎಚ್ಚರಿಸಿದರು.
ನ್ಯಾಯಬೆಲೆ ಅಂಗಡಿಯ ಬಗ್ಗೆ ಜನರಿಂದ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಮಾತನಾಡಿ, ಆಹಾರ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ದೂರವಾಣಿ ಮುಖಾಂತರ ಸಂಪರ್ಕಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ಜಿಪಂ ಸದಸ್ಯ ಹೊನಗೋಡು ರತ್ನಾಕರ, ತಾಪಂ ಸದಸ್ಯ ಸರೋಜಾ ಲಿಂಗರಾಜ್, ಗ್ರಾಪಂ ಅಧ್ಯಕ್ಷ ವೀಣಾ ಸಂಪಳ್ಳಿ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ. ಹೊಳಿಯಪ್ಪ, ಗ್ರಾಪಂ ಸದಸ್ಯರು ಮತ್ತಿತರರು ಇದ್ದರು.
ಫಲಾನುಭವಿಗಳಿಗೆ ವಿತರಿಸದ್ದಕ್ಕೆ ಅಸಮಾಧಾನ
ನಮ್ಮ ಭೂಮಿ ನಮ್ಮ ತೋಟ ಯೋಜನೆಯಡಿ 8 ವರ್ಷದ ಹಿಂದೆ ಉಳ್ಳೂರು ಗ್ರಾಮ ಪಂಚಾಯಿತಿಯಿಂದ 8,89,500 ವೆಚ್ಚದಲ್ಲಿ 17 ಎಕರೆ ಜಮೀನು ಖರೀದಿಸಿ ಫಲಾನುಭವಿಗಳಿಗೆ ವಿತರಿಸದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದನ್ನು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಖಂಡಿಸಿದರು.
ಈ ಜಮೀನನ್ನು 126 ಜನ ಪರಿಶಿಷ್ಟ ಜಾತಿಯ ಭೂರಹಿತ ಕೂಲಿ ಕಾರ್ಮಿಕರನ್ನು ಗುರುತಿಸಿ ಅವರಿಗೆ ಚಿಕ್ಕ ಕೈತೋಟ ನಿರ್ಮಿಸಲು ಯೋಜನೆ ನಿರ್ಮಿಸಲಾಗಿತ್ತು. ಆದರೆ, ಈ ಯೋಜನೆಯ ಫಲಾನುಭವಿಗಳಿಗೆ ವಿತರಿಸದೆ ಯೋಜನೆ ಹಳ್ಳ ಹಿಡಿದಿದೆ.
ನಾನು ಶಾಸಕನಾದ ನಂತರ ಈ ಯೋಜನೆಗೆ ಮರು ಚಾಲನೆ ನೀಡಿದ್ದೇನೆ. ಯೋಜನೆ ಜಾರಿಯಾಗಲು ಅಧಿಕಾರಿಗಳೊಂದಿಗೆ ಚರ್ಚಿಸಿ ಫಲಾನುಭವಿಗಳ ಹೆಸರಿಗೆ ವರ್ಗಾವಣೆ ಮಾಡಿಸಲಾಗುವುದು ಎಂದರು.
ಈ ಬಗ್ಗೆ “OÚ«ÚsÚ®Úúڒ¥ÚæàM¦Væ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್, 126 ಜನ ಫಲಾನುಭವಿಗಳಿಗೆ ಜಮೀನು ನೋಂದಣಿ ಶುಲ್ಕ ಪಾವತಿ ಮಾಡಲು ಪಂಚಾಯಿತಿಯಿಂದ ಹಣ ಕಾಯ್ದಿರಿಸದೆ ಇರುವುದು ಈ ಯೋಜನೆ ಕುಂಠಿತಗೊಳ್ಳಲು ಕಾರಣ.
ವಿಧಾನಸಭಾಧ್ಯಕ್ಷರ ಆದೇಶದಂತೆ ಕೂಡಲೇ 2,64 ಲಕ್ಷ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.