ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 8
ಕೇಂದ್ರ ಸರ್ಕಾರ ಮತ್ತೊಮ್ಮೆ ಅಡುಗೆ ಅನಿಲ ಹಾಗೂ ಆಟೋ ಗ್ಯಾಸ್ ದರ ಏರಿಸಿರುವ ಕ್ರಮ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಈಗಾಗಲೇ ಹಲವು ಬಾರಿ ಅನಿಲ ಬೆಲೆ ಏರಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ಬೆಲೆ ಏರಿಸಿ ಬಡ ಮತ್ತು ಮಧ್ಯ ವರ್ಗದವರ ಬದುಕನ್ನು ಬರ್ಬರವಾಗಿಸಿದೆ ಎಂದು ಮೋರ್ಚಾ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಸಿದ್ದರಿಂದಾಗಿ ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳ ಬೆಲೆಗಳೂ ಏರಿಕೆಯಾಗಿದ್ದವು. ಈಗ ಮತ್ತೊಮ್ಮೆ ಅನಿಲ ಬೆಲೆ ಏರಿಸಿ ಮಧ್ಯಮ ವರ್ಗದವರ ಮೇಲೆ ಗದಾಪ್ರಹಾರ ಮಾಡಿದೆ. ಬೆಲೆ ಏರಿಸುವುದನ್ನು ಚಾಳಿ ಮಾಡಿಕೊಂಡಿರುವ ಕೇಂದ್ರ ಸರ್ಕಾರದ ಬಡ, ಮಧ್ಯಮ ವರ್ಗದವರ ಜೀವನವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಟೀಕಿಸಿದರು.
ದುಸ್ತರ: ಈ ಹಿಂದೆ ಸಬ್ಸಿಡಿ ಸಿಲಿಂಡರ್‌ಗಳನ್ನು 9ಕ್ಕೆ ಸೀಮಿತಗೊಳಿಸಿದ ಕಾರಣದಿಂದಾಗಿ ಮಧ್ಯಮರ್ಗದ ಕುಟುಂಬ ನಿರ್ವಹಣೆ ದುಸ್ತರವಾಗಿತ್ತು. ಇದಲ್ಲದೆ ಸಿಲಿಂಡರ್ ಸಂಪರ್ಕ ಪಡೆಯುವುದೂ, ಹೆಚ್ಚುವರಿ ಸಿಲಿಂಡರ್‌ಗಾಗಿ ಪರದಾಡುವುದೂ ಸಾಮಾನ್ಯ ಸಂಗತಿ. ಆದರೆ, ಇದ್ಯಾವುದನ್ನೂ ತಲೆಕೆಡಿಸಿಕೊಳ್ಳದ ಸರ್ಕಾರ ಸಿಲಿಂಡರ್ ಬೆಲೆಗಳ ಏರಿಕೆ ಪ್ರಕ್ರಿಯೆಯನ್ನು ಮಾತ್ರ ಮುಂದುವರಿಸುತ್ತಿರುವುದು ಖಂಡನೀಯ ಎಂದು ಮೋರ್ಚಾ ಮುಖಂಡರು ತಿಳಿಸಿದರು.
ಮಧ್ಯಪ್ರವೇಶಿಸಲಿ: ಕೂಡಲೇ ಏರಿಸಿರುವ ಅನಿಲ ಬೆಲೆ ಇಳಿಸಬೇಕು ಎಂಬುದು ಬಿಜೆಪಿಯ ಆಗ್ರಹ. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸಾಮಾನ್ಯ ಜನರ ಸಂಕಷ್ಟದ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಅನಿಲ ಬೆಲೆ ಏರಿಕೆ ಹಿಂತೆಗೆದುಕೊಳ್ಳದಿದ್ದಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದೆ.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರತಿಭಟನೆ ವೇಳೆ ಹಾಜರಿದ್ದರು. ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಮಂಜುಳಾ ಪಾಂಡೆ, ಸುರೇಖಾ ಮುರಳೀಧರ್, ಮಹಾಲಕ್ಷ್ಮಿ, ಗಿರಿಜಾ ಪಾಟೀಲ್, ಯಶೋಧಾ, ಗೀತಾ, ಮಲ್ಲಮ್ಮ, ಲಕ್ಷ್ಮಮ್ಮ, ರಾಧಾ ಮತ್ತಿತರರು ಹಾಜರಿದ್ದರು.