ಜನಸಾಮಾನ್ಯರು ಬದುಕಲು ಅವಕಾಶ ನೀಡಿ
ಕ.ಪ್ರ.ವಾರ್ತೆ, ಸಾಗರ, ಜ. 8
ಕೇಂದ್ರ ಸರ್ಕಾರ ಅಡುಗೆ ಅನಿಲ ಹಾಗೂ ಆಟೋಗಳಿಗೆ ವಿತರಿಸುವ ಅನಿಲದ ಬೆಲೆಯನ್ನು ಹೆಚ್ಚಿಸಿದ ಕ್ರಮವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬುಧವಾರ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಸ್ತೂರಿ ನಾಗರಾಜ್ ಮಾತನಾಡಿ, ಕೇಂದ್ರ ಸರ್ಕಾರ ಹಲವು ಬಾರಿ ಅನಿಲದ ದರ ಏರಿಸಿ ಬಡ ಹಾಗೂ ಮಧ್ಯಮ ವರ್ಗದವರು ಬದುಕುವುದೆ ದುಸ್ತರ ಎನ್ನುವ ಸ್ಥಿತಿ ನಿರ್ಮಾಣ ಮಾಡಿದೆ. ಕೇಂದ್ರದ ಅಸಮರ್ಪಕ ಆರ್ಥಿಕ ನೀತಿಯಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇದರ ಜೊತೆಗೆ ನಿರಂತರ ಡಿಸೇಲ್, ಪೆಟ್ರೋಲ್ ಹಾಗೂ ಅನಿಲ ಬೆಲೆ ಏರಿಸುತ್ತಿರುವುದನ್ನು ಖಂಡನೀಯ ಎಂದರು.
ಜನರ ಸಂಕಷ್ಟವನ್ನು ಅರಿತು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ಏರಿಸಿರುವ ಅನಿಲದ ಬೆಲೆಯನ್ನು ತಕ್ಷಣ ಇಳಿಸಿ ಜನಸಾಮಾನ್ಯರೂ ಈ ದೇಶದಲ್ಲಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲವಾದರೆ ಬಿಜೆಪಿ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಮೋರ್ಚದ ಗ್ರಾಮಾಂತರ ಘಟಕದ ಅಧ್ಯಕ್ಷೆ ಶಾಂತಾ ದೇವಪ್ಪ, ಕಾರ್ಯದರ್ಶಿ ಮಂಗಳಗೌರಿ, ನಗರ ಘಟಕದ ಅಧ್ಯಕ್ಷೆ ಲಲಿತಾ, ಪ್ರಮುಖರಾದ ಗಂಗಮ್ಮ, ನೇತ್ರಾವತಿ, ಅನುಪಮ, ವಿನೋದ, ರತ್ನಮ್ಮ, ಶ್ರೀಲತಾ, ಸುವರ್ಣ, ನಗರಸಭೆ ಸದಸ್ಯೆ ನಾಗರತ್ನ ಇನ್ನಿತರರು ಹಾಜರಿದ್ದರು.