ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯಾವ ಏಜೆನ್ಸಿಯೂ ಕಾನೂನುಬದ್ಧ ಮಾನ್ಯತೆ ಪಡೆದಿಲ್ಲ

Lingaraj Badiger
Updated On : 9 Jan 2014, 10:46 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 8
ಜಿಲ್ಲೆಯಾದ್ಯಂತ ಹೊರಗುತ್ತಿಗೆ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಪದೇಪದೇ ದೂರುಗಳು ಕೇಳಿಬರುತ್ತಿದ್ದವು. ಆದರೆ ಯಾವ ಏಜೆನ್ಸಿಯೂ ಸಹ ಕಾನೂನು ಬದ್ಧ ಮಾನ್ಯತೆಯನ್ನೇ ಪಡೆದಿಲ್ಲ ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಹೊರಜಗತ್ತಿಗೆ ಏಜೆನ್ಸಿ ಜತೆಗೆ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ಕಾನೂನು ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ.
ಈ ಅಂಶವನ್ನು ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ದಾಖಲೆ ಸಹಿತ ಎಳೆಎಳೆಯಾಗಿ ಬಿಡಿಸಿಟ್ಟಾಗ ಇಡೀ ಸಭೆಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ದವಿತ್ತು. ಇದೂವರೆಗೆ ಯಾರ ಗಮನಕ್ಕೂ ಬಾರದೆ ನಡೆಯುತ್ತಿದ್ದ ದೊಡ್ಡ ಮಟ್ಟದ ಹಗರಣವೊಂದು  ಆಗ ಬಯಲಿಗೆ ಬಂದಿತ್ತು.
ಹೀಗಿದೆ ವಾಸ್ತವ: ಜಿಲ್ಲೆಯ ಹತ್ತಾರು ಇಲಾಖೆಗಳು ಮ್ಯಾನ್ ಪವರ್ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಇಲಾಖೆ ಸುಪರ್ದಿಯಲ್ಲಿರುವ ಕಟ್ಟಡಗಳಲ್ಲಿ ಕೆಲಸ ಮಾಡಲು ಸಿಬ್ಬಂದಿ ನೇಮಿಸಿಕೊಳ್ಳುತ್ತಾರೆ. ಈ ಒಪ್ಪಂದದಂತೆ ಹಣವನ್ನು ಏಜೆನ್ಸಿಗೆ ನೀಡುತ್ತಿದ್ದು, ಅವರು ಸಿಬ್ಬಂದಿಗೆ ವೇತನ ನೀಡುತ್ತಾರೆ.
ಈ ಸಿಬ್ಬಂದಿಗೆ ಸರಿಯಾಗಿ ವೇತನ, ಇಎಸ್‌ಐ-ಪಿಎಫ್ ಕಟ್ಟುತ್ತಿಲ್ಲ, ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಪದೇಪದೇ ಕೇಳಿಬರುತ್ತಿದ್ದವು.
ಇದಕ್ಕೆ ಹೊಸ ಆಯಾಮ ನೀಡಿದ ಆಯನೂರು ಮಂಜುನಾಥ್, ಈ ಏಜೆನ್ಸಿಗಳು ಅಸಿಸ್ಟೆಂಟ್ ಲೇಬರ್ ಕಮಿಷನರ್ ಅವರಿಂದ ಪರವಾನಗಿ ಪಡೆಯಬೇಕಿತ್ತು. ಜಿಲ್ಲೆಯಲ್ಲಿರುವ ಯಾವ ಏಜೆನ್ಸಿಗಳೂ ಸಹ ಅನುಮತಿ ಪಡೆದಿಲ್ಲ. ಇವರು ಈಗ ಪಡೆದಿರುವ ಲೈಸೆನ್ಸ್ ಪ್ರಕಾರ ಅವರ ಕಚೇರಿಯಲ್ಲಿ ನಾಲ್ಕು ಸಿಬ್ಬಂದಿಯನ್ನು ನೇಮಿಸಿಕೊಳ್ಳಬಹುದಷ್ಟೇ. ಆದರೆ ಇವರು ನೂರಾರು ಸಿಬ್ಬಂದಿಯನ್ನು ವಿವಿಧ ಇಲಾಖೆಗಳಿಗೆ ಕಳುಹಿಸಿ ಕೋಟ್ಯಂತರ ಹಣ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದರು.
ಅರ್ಹತೆ ಇಲ್ಲ: ಕಾರ್ಮಿಕ ಇಲಾಖೆ ಅಧಿಕಾರಿ ವಿಶ್ವನಾಥ್ ಅವರನ್ನು ಸಭೆಯಲ್ಲಿ ಪ್ರಶ್ನಿಸಿದಾಗ ಅವರು ಒಪ್ಪಿಕೊಂಡು, ಜಿಲ್ಲೆಯಲ್ಲಿರುವ ಯಾವ ಏಜೆನ್ಸಿಗೂ ಸಹ ಸಿಬ್ಬಂದಿಯನ್ನು ಪೂರೈಸುವ ಅರ್ಹತೆ ಇಲ್ಲ. ಯಾವ ಏಜೆನ್ಸಿಯೂ ಕಾನೂನುಬದ್ಧ ಅಲ್ಲ ಎಂದರು.
ವಿಷಯ ಕೇಳಿ ಚಕಿತರಾದ ಸಿಇಒ ಸಸಿಕಾಂತ್ ಸೆಂಥಿಲ್, ಈ ವಿಷಯವನ್ನು ಮೊದಲೇ ಏಕೆ ನಮ್ಮ ಗಮನಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದರು.
ಅಧಿಕಾರಿಗಳದ್ದೂ ತಪ್ಪು: ಚರ್ಚೆ ಮುಂದುವರಿಸಿದ ಆಯನೂರು ಮಂಜುನಾಥ್, ಇದರಲ್ಲಿ ಅಧಿಕಾರಿಗಳೂ ಸಹ ತಪ್ಪೆಸಗಿದ್ದಾರೆ. ಏಜೆನ್ಸಿಗಳಿಗೆ ಕಾನೂನುಬದ್ಧ ಸ್ಥಾನಮಾನ ಇಲ್ಲವೆಂದು ಗೊತ್ತಿದ್ದರೂ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ಇವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಇದು ನಂಬಿಕೆ ದ್ರೋಹ ಪ್ರಕರಣವಾಗಿರುವುದರಿಂದ ಕಾರ್ಮಿಕ ಇಲಾಖೆ ಕೂಡಲೇ ಇಲಾಖೆ ಮುಖ್ಯಸ್ಥರ ವಿರುದ್ಧ ದೂರು ನೀಡಬೇಕು ಎಂದು ಒತ್ತಾಯಿಸಿದರು.
ಆಗ ಕಾರ್ಮಿಕ ಇಲಾಖೆಯ ವಿಶ್ವನಾಥ್, ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಿಗೆ ನೋಟಿಸ್ ನೀಡಿದ್ದೇವೆ ಎಂದರು. ಏಜೆನ್ಸಿಗಳು ಸಿಬ್ಬಂದಿಗೆ ಕಡಿಮೆ ವೇತನ ನೀಡಿದರೆ ವ್ಯತ್ಯಾಸದ ವೇತನವನ್ನು ದಂಡಸಹಿತ ಸಿಬ್ಬಂದಿಗೆ ನೀಡುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯದ್ದೇ ಆಗಿರುತ್ತದೆ ಎಂದು ಕಾನೂನು ಹೇಳಿದೆ. ಯಾರೂ ಪಾಲಿಸುತ್ತಿಲ್ಲ ಎಂದರು.
ಉತ್ತಮ ಅವಕಾಶ: ಸಿಇಒ ಸಸಿಕಾಂತ್ ಸೆಂಥಿಲ್ ಅವರು ಈ ವಿಷಯಕ್ಕೆ ಪ್ರತಿಕ್ರಿಯಿಸಿ, ಇಡೀ ವ್ಯವಸ್ಥೆ ಶುದ್ಧೀಕರಿಸಲು ಇದೊಂದು ಉತ್ತಮ ಅವಕಾಶ ಎಂದು ಹೇಳಿ, ಕೂಡಲೇ ಈ ಕುರಿತು ವರದಿ ಸಲ್ಲಿಸುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸದಸ್ಯ ಸುಂದರೇಶ್, ಏಜೆನ್ಸಿಗಳ ಬಗ್ಗೆ ತನಿಖೆ ನಡೆಸಿ ಅಕ್ರಮಗಳ ಬಗ್ಗೆ ಸಲ್ಲಿಸಿರುವ ಜಿ.ಪಂ. ಸಮಿತಿ ವರದಿ ನೆನೆಗುದಿಗೆ ಬಿದ್ದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈಸೂರು ಬಸವರಾಜ್ ಅವರು ಆರೋಗ್ಯ ಇಲಾಖೆಯು ಹೊರಗುತ್ತಿಗೆ ಸಿಬ್ಬಂದಿಗೆ ಸಮರ್ಪಕ ವೇತನ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹೇಮಾ ಪಾವನಿ ಇದ್ದರು.

ಅಡಕೆ ನಿಷೇಧದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ಸುಪ್ರೀಂಕೋರ್ಟ್‌ನಲ್ಲಿ ಅಡಕೆ ಹಾನಿಕರ ಎಂಬ ವರದಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಆದ್ದರಿಂದ ಜಿಲ್ಲಾ ಪಂಚಾಯ್ತಿಯು ಅಡಕೆ ಬೆಳೆಗಾರರ ಪರ ನಿರ್ಣಯ ಕೈಗೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಇದನ್ನು ರಾಜಕೀಯವಾಗಿ ನೋಡುವುದು ಬೇಡ. ಈ ವರದಿಯನ್ನು ಹಿಂಪಡೆಯುಂತೆ ಕೇಂದ್ರಕ್ಕೆ ಒತ್ತಾಯಿಸೋಣ ಎಂಬ ಅವರ ಪ್ರತಿಪಾದನೆಯನ್ನು ಬೆಂಬಲಿಸಿ ವಿಧಾನಪರಿಷತ್ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್, ಪಿ.ವಿ. ಕೃಷ್ಣಭಟ್ ಮಾತನಾಡಿದರು. ವಿಪಕ್ಷ ನಾಯಕ ಕಲಗೋಡು ರತ್ನಾಕರ್, ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆದರೂ ನಿರ್ಣಯ ಮಾಡುವುದು ಸೂಕ್ತ ಎಂದರು. ಅಧ್ಯಕ್ಷರು ರೂಲಿಂಗ್ ನೀಡಿ, ಅಡಕೆ ನಿಷೇಧ ಮಾಡದಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ಸೂಚಿಸಿದರು.

ಇತರೆ ಹೈಲೈಟ್ಸ್...
ಹಿಂದಿನ ಸಭೆಯಲ್ಲಿ ಅಮಾತಿಗೆ ಶಿಫಾರಸು ಮಾಡಲ್ಪಟ್ಟಿದ್ದ ಡಿಎಚ್‌ಒ ಶಿವಣ್ಣ ರೆಡ್ಡಿ ಸಭೆಯಲ್ಲಿ ಉಪಸ್ಥಿತರಿರುವುದಕ್ಕೆ ಸದಸ್ಯರ ಆಕ್ಷೇಪ. ಮುಕ್ಕಾಲು ಗಂಟೆ ಸಭೆ ಮುಂದೂಡಿ ಚರ್ಚೆ. ಕೊನೆಗೆ ಬದಲಿ ಅಧಿಕಾರಿಯನ್ನು ನಿಯೋಜಿಸಲು ಸಿಇಒ ಸೂಚನೆ.
ಹಸಿರುಮನೆ ಹಾಗೂ ಸಂಸ್ಕರಣಾ ಘಟಕಗಳಿಗೆ ಸಹಾಯಧನ ಮಂಜೂರು ಮಾಡುವಲ್ಲಿ ತೋಟಗಾರಿಕೆ ಇಲಾಖೆಯಿಂದ ಲೋಪ ಎಂದು ಹೊಸಗೋಡು ರತ್ನಾಕರ್ ಆರೋಪ. ಲಂಚ ನೀಡದಿದ್ದರೆ ಸಹಾಯಧನ ನೀಡುತ್ತಿಲ್ಲ ಎಂಬುದಕ್ಕೆ ಸಭೆಯ ಬೆಂಬಲ. ಈ ಬಗ್ಗೆ ಸಂಪೂರ್ಣ ತನಿಖೆಗೆ ಅಧ್ಯಕ್ಷರ ರೂಲಿಂಗ್.
ಪದ್ಮಾವತಿ ಚಂದ್ರಕುಮಾರ್ ಅವರ ಪ್ರಸ್ತಾವದ ಮೇಲೆ ಚಪ್ಪೆರೋಗದಿಂದ ಸಾವು ಕಂಡ ಜಾನುವಾರುಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಿ ನಿರ್ಣಯ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಬೆಂಗಳೂರಿನಲ್ಲಿ ಸಭೆ ಇಲ್ಲದಿದ್ದರೂ ಈ ನೆಪ ಹೇಳಿ ಸಭೆಗೆ ಗೈರು ಹಾಜರಾಗಿದ್ದಕ್ಕೆ ಅಶೋಕ್ ನಾಯ್ಕ್ ಆಕ್ಷೇಪ. ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ.
ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಸುತ್ತಿರುವುದಾಗಿ ಸುಂದರೇಶ್ ಆರೋಪ. ಕುಮಾರ್, ಕೃಷ್ಣೇಗೌಡ ಬೆಂಬಲ. ಖುದ್ದು ತನಿಖೆ ನಡೆಸುವುದಾಗಿ ಸಿಇಒ ಹೇಳಿಕೆ.
ತೀರ್ಥಹಳ್ಳಿ ಜೇಸಿ ಆಸ್ಪತ್ರೆಯಲ್ಲಿರುವ ಹೊಸ ಅಂಬುಲೆನ್ಸ್ ವಾಹನಕ್ಕೆ ಚಾಲಕರನ್ನು ನೇಮಿಸಲು ಸದಸ್ಯ ಯಲ್ಲಪ್ಪ ಒತ್ತಾಯ.
ಅಡಕೆ ಕೊಳೆರೋಗ ಪೀಡಿತ ರೈತರಿಗೆ ಪರಿಹಾರ ವಿತರಣೆ ಬಾಕಿ ಇದ್ದು, ವಿತರಿಸಲು ಷಡಕ್ಷರಿ ಒತ್ತಾಯ.
ಈ ಸ್ವತ್ತು ಯೋಜನೆ ಜಾರಿಗೆ ಭಾನುಪ್ರಕಾಶ್ ಆಕ್ಷೇಪ. ತೊಡಕು ನಿವಾರಿಸಲು ಒತ್ತಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement