ರಾಷ್ಟ್ರಪತಿ ಮಧ್ಯೆಪ್ರವೇಶಿಸಲಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 8
ಅಡುಗೆ ಅನಿಲ ದರ ಏರಿಕೆಯನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಬುಧವಾರ ಆಯನೂರು ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಕೂಲಿ ಕಾರ್ಮಿಕರು, ಬಡವರು, ಹಾಗೂ ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟವಾಗಿದೆ. ಅಡುಗೆ ಅನಿಲ, ತೈಲ ಉತ್ಪನ್ನಗಳು, ಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಲೇ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಬೀದಿಗಳಲ್ಲಿ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ ಈಗ ಜನಸಾಮಾನ್ಯರ ಕೈಗೆ ಸಿಗದಂತಾಗಿದೆ. ಗ್ಯಾಸ್ ಸಂಪರ್ಕ ಪಡೆಯುವುದು ದುಸ್ತರವಾಗಿದೆ. ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದರು.
ಕೂಡಲೇ ಏರಿಕೆ ಮಾಡಿರುವ ಅನಿಲ ಬೆಲೆಯನ್ನು ಇಳಿಸಬೇಕು. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸಾಮಾನ್ಯ ಜನರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆಯನೂರು, ಹಾರನಹಳ್ಳಿ, ಮಲ್ಲಾಪುರ, ಕುಂಸಿ, ಚೋರಡಿ, ಮಂಡಘಟ್ಟ, ಸಿರಿಗೆರೆ ಹಾಗೂ ತಮ್ಮಡಿಹಳ್ಳಿ ಗ್ರಾಮಗಳಿಂದ ಎಲ್ಲಾ ಮಹಿಳೆಯರು, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದ್ಯಾಲಕ್ಷ್ಮೀಪತಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯ ನರಸಿಂಹಪ್ಪ, ಸದಸ್ಯೆ ಚಂದ್ರಕಲಾ ಹಾಗೂ ಆಯನೂರು ಮಹಿಳಾ ಘಟಕದ ನಾಗಮಣಿ, ರಾಜೇಶ್ವರಿ, ಗೀತಾಕುಮಾರ್, ಸರಸ್ವತಿ ಶೆಟ್ಟಿ ಮತ್ತಿತರರು ಇದ್ದರು.