ಒಂಟಿ ಸಲಗದ ಹಾವಳಿ
ಹೊಸನಗರ: ತಾಲೂಕಿನ ಮಾಣಿ ಡ್ಯಾಂ ಪರಿಸರದಲ್ಲಿ 2 ದಿನದಿಂದ ಒಂಟಿಸಲಗ ಪ್ರತ್ಯಕ್ಷವಾಗಿದ್ದು ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ.
ಮಾಣಿ ಹಿನ್ನೀರಿನಲ್ಲಿ ಈಜಿಕೊಂಡು ಬಂದ ಆನೆ ಕಾಲಿಗೆ ಮೀನುಗಾರರು ಬೀಸಿದ್ದ ಬಲೆ ಸಿಕ್ಕಿದ್ದು ಅದನ್ನು ಹಾಗೆ ತಂದು ಮರವೊಂದಕ್ಕೆ ನೇತು ಹಾಕಿದೆ. ಅಲ್ಲದೆ ದಡದಲ್ಲಿದ್ದ ಮೀನುಗಾರರ ತೆಪ್ಪವನ್ನು ಒಸಗಿ ಹಾಳುಗೆಡವಿದೆ. ಕೆಲವರ ಜಮೀನಿನ ಮೇಲೆ ಹಾದು ಹೋದ ಆನೆ ಅಲ್ಲಲ್ಲಿ ಬಾಳೆಯನ್ನು ತಿಂದಿದೆ. ಮತ್ತೆ ಜಲಾಶಯ ವ್ಯಾಪ್ತಿಯ ಅರಣ್ಯದೊಳಗೆ ಸೇರಿಕೊಂಡಿದ್ದು ಆಗಾಗ ಪ್ರತ್ಯಕ್ಷಗೊಳ್ಳುತ್ತ ಗ್ರಾಮಸ್ತರೊಂದಿಗೆ ಕಣ್ಣುಮುಚ್ಚಾಲೆ ಆಟವಾಡುತ್ತಿದೆ.
ಅರಣ್ಯ ಇಲಾಖೆ ಕಟ್ಟೆಚ್ಚರ: ಆನೆ ಬಂದಿರುವ ಸುದ್ದಿ ತಿಳಿದ ನಗರ ವಲಯ ಅರಣ್ಯ ಇಲಾಖೆ ಆನೆ ಚಲನವಲನದ ಬಗ್ಗೆ ನಿಗಾವಹಿಸಿದೆ. ಎರಡುದಿನದಿಂದ ಅರಣ್ಯ ಸಿಬ್ಬಂದಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದು ಹೆಚ್ಚಿನ ಅಪಾಯ ಸಂಭವಿಸದಂತೆ ಗಮನಹರಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ನಗರ ವಲಯ ಅರಣ್ಯಾಧಿಕಾರಿ ಮೃತ್ಯುಂಜಯಪ್ಪ ಅಭಯ ನೀಡಿದ್ದಾರೆ.
ಹಿಂದೆಯೂ ಬಂದಿತ್ತು: ಎರಡು ವರ್ಷದ ಹಿಂದೆ ಆಗುಂಬೆ ಕಾಡಿನಿಂದ ಮಾಣಿ ಮಾರ್ಗವಾಗಿ ಸಾಗರ ಶರಾವತಿ ಹಿನ್ನೀರು ಪ್ರದೇಶದಲ್ಲಿ ಎರಡು ಮೂರು ಬಾರಿ ಹಾದು ಹೋಗಿತ್ತು. ಅಲ್ಲದೆ ಚುನಾವಣೆಯಲ್ಲಿ ಮತ ಚಲಾಯಿಸಿ ಬರುತ್ತಿದ್ದ ಮಹಿಳೆಯೋರ್ವಳನ್ನು ತುಳಿದು ಸಾಯಿಸಿದ ವರದಿ ಸಾಗರ ತಾಲೂಕಿನಲ್ಲಿ ವರದಿಯಾಗಿದ್ದನ್ನು ಸ್ಮರಿಸಬಹುದು. ಈಗ ಬಂದಿರುವುದು ಕೂಡ ಅದೇ ಆನೆ ಇರಬಹುದು ಎಂದು ಶಂಕಿಸಲಾಗಿದೆ.