ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಲ್ಲುಗಂಗೂರು ಬಳಿಯ 7 ಅಕ್ರಮ ಕ್ರಷರ್ ಮೇಲೆ ದಾಳಿ

Lingaraj Badiger
Updated On : 10 Jan 2014, 12:17 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.9
ಕಲ್ಲುಗಂಗೂರು ಬಳಿಯ ಏಳು ಅಕ್ರಮ ಕ್ರಷರ್ ಮೇಲೆ ವಿವಿಧ ಇಲಾಖೆಗಳು ದಾಳಿ ನಡೆಸಿದ್ದು, 700 ಮೆಟ್ರಿಕ್ ಟನ್ ಅದಿರು ವಶಪಡಿಸಿಕೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ಕಲ್ಲು ಕ್ವಾರಿ ಪ್ರದೇಶಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಆಗ ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ಮಾಲೀಕರು ಅಲ್ಲಿಂದ ಪರಾರಿಯಾಗಿದ್ದಾರೆ.
ನೋಟಿಸ್:  ಉತ್ತರ ಕರ್ನಾಟಕ ಕಡೆಯಿಂದ ಬಂದಿದ್ದ ನೂರಾರು ಕಾರ್ಮಿಕರು ಅಲ್ಲಿದ್ದು, ಶಾಲೆಗೆ ಹೋಗದ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಪತ್ತೆಯಾಗಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬಿಂದನ್ ಪಾಟೀಲ್ ಅವರನ್ನು ಈ ಕುರಿತು ಸಂಪರ್ಕಿಸಿದಾಗ, ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀ, ರಾಜಲಕ್ಷ್ಮೀ, ಬೀರಲಿಂಗೇಶ್ವರ, ಶಿವ, ಎಪಿಜೆ ಹಾಗೂ ಎಸ್.ಬಾಬು ಕ್ರಷರ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಇದು ಸರ್ಕಾರಿ ಭೂಮಿಯಾಗಿದ್ದು, ಕ್ವಾರಿಗಳಿಗೆ ಮಾಲೀಕರು ಇಲ್ಲ. ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಿಸದ ಕಾರಣ ಈ ಕ್ರಷರ್ ಮಾಲೀಕರಿಗೆ ನೋಟೀಸ್ ನೀಡಲಾಗುವುದು ಎಂದರು.
ದಾಳಿ ಸಂದರ್ಭ ಎಸ್ಪಿ ಕೌಶಲೇಂದ್ರ ಕುಮಾರ್, ತಹಸೀಲ್ದಾರ್ ಕೊಟ್ರೇಶ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
ಶಾಲೆ ಬಿಟ್ಟ ಮಕ್ಕಳು:  ಸ್ಥಳದಲ್ಲಿ ಶಾಲೆ ಬಿಟ್ಟ ಮಕ್ಕಳು ಪತ್ತೆಯಾದ ಕಾರಣ ಸ್ಥಳಕ್ಕೆ ಬಿಇಓ ಹಾಲಾನಾಯ್ಕ್ ಆಗಮಿಸಿದರು. ಉತ್ತರ ಕರ್ನಾಟಕದ ಬೀದರ್, ಗುಲ್ಬರ್ಗ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳ ಕುಗ್ರಾಮದಿಂದ ಆಗಮಿಸಿದ ಹಲವು ಕುಟುಂಬಗಳು ಅಲ್ಲಿದ್ದು, ಅವರ ಮಕ್ಕಳು ಶಿಕ್ಷಣ ವಂಚಿತರಾಗಿದ್ದು, ಅವರಿಗಾಗಿ ಇಲ್ಲಿಯೇ ಟೆಂಟ್ ಶಾಲೆ ತೆರೆಯಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement