ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಸ್ತೂರಿ ರಂಗನ್ ವರದಿ: ತರಾತುರಿ ನಿರ್ಣಯ ಬೇಡ

Lingaraj Badiger
Updated On : 10 Jan 2014, 12:08 pm

ಕ.ಪ್ರ.ವಾರ್ತೆ  ಶಿವಮೊಗ್ಗ  ಜ.9
ಪಶ್ಚಿಮಘಟ್ಟ ಕುರಿತು ಡಾ. ಕಸ್ತೂರಿ ರಂಗನ್ ವರದಿ ಮತ್ತು ಈ ಕುರಿತು ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಆದೇಶ ಕುರಿತು ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ. ಆದರೆ, ಈ ವಿಷಯದಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ವೃಕ್ಷಲಕ್ಷ ಆಂದೋಲನ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ.
ಗುರುವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ ಆಂದೋಲದ ಸದಸ್ಯರ ಅನಂತ ಹೆಗಡೆ ಆಶೀಸರ, ರಾಘವೇಂದ್ರ, ಬಿ.ಎಂ. ಕುಮಾರಸ್ವಾಮಿ, ಹನಿಯ ರವಿ ಅವರಿದ್ದ ನಿಯೋಗ ಮನವಿ ಸಲ್ಲಿಸಿತು.
ಅಗತ್ಯ ನಿರ್ಧಾರ: ಪಶ್ಚಿಮಘಟ್ಟದ ಸಂರಕ್ಷಣೆ ಕಾರ್ಯದಲ್ಲಿ ನಿರತರಾಗಿರುವ ಪರಿಸರ ಸಂಘ ಸಂಸ್ಥೆಗಳೂ ಸೇರಿದಂತೆ ಮಲೆನಾಡಿನ ವನವಾಸಿಗಳು, ರೈತರು, ಮಹಿಳೆಯರು, ಜನಪ್ರತಿನಿಧಿಗಳ ಜೊತೆ ವ್ಯಾಪಕ ಚರ್ಚೆ ನಡೆಸಿದ ನಂತರ ಅಗತ್ಯ ನಿರ್ಧಾರ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.
ಡಾ. ಮಾಧವ್ ಗಾಡ್ಗೀಳ್ ವರದಿ, ಡಾ. ಕಸ್ತೂರಿ ರಂಗನ್ ವರದಿ ಈ ಕುರಿತ ಕೇಂದ್ರದ ಆದೇಶ, ಇವುಗಳ ವಿಶ್ಲೇಷಣೆ ಎಲ್ಲಾ ಸೇರಿ ಗೊಂದಲ ನಿರ್ಮಾಣ ಆಗಿದೆ. ಈ ಗೊಂದಲ ನಿವಾರಣೆ ಹೆಸರಲ್ಲಿ ಪಶ್ಚಿಮಘಟ್ಟದ ಸಂರಕ್ಷಣೆ ವಿಷಯ ಆದ್ಯತೆ ಕಳೆದುಕೊಳ್ಳುತ್ತಿದೆ. ಪರಿಸರ ಅರಣ್ಯ ಜೀವವೈವಿದ್ಯ ವಿಷಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿರುವುದಾಗಿ ಆಂದೋಲನ ತಿಳಿಸಿದೆ.
ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳನ್ನು (ಹಳ್ಳಿಗಳ ಪಟ್ಟಿ) ಗುರುತಿಸುವಲ್ಲಿ ವೈಜ್ಞಾನಿಕ ಮಾರ್ಗದರ್ಶಿ ಸೂತ್ರ ಅನುಸರಿಸಬೇಕು. ಈ ವಿಷಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕೇ ವಿನಃ ಇಡೀ ಪರಿಸರ ಸೂಕ್ಷ್ಮ ಪ್ರದೇಶ ವಿಷಯವನ್ನೇ ಕೈಬಿಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಜ್ಞ ವರದಿ: ಹಿಂದಿನ ಸರ್ಕಾರದಲ್ಲಿ ರಚನೆಗೊಂಡಿದ್ದ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಹಲವು ತಜ್ಞ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕರ್ನಾಟಕದ ಪಶ್ಚಿಮಘಟ್ಟವನ್ನು ಹೋಬಳಿ ಮಟ್ಟದಲ್ಲಿ ಗುರುತಿಸಲಾಗಿತ್ತು. ಅರಣ್ಯ ಇಲಾಖೆಯಲ್ಲೇ ಇರುವ ಪಶ್ಚಿಮಘಟ್ಟ ವ್ಯಾಪ್ತಿ ಕುರಿತ ವರದಿ ಕುರಿತು ಅಧಿಕೃತ ಆದೇಶ ಹೊರಡಿಸಬೇಕು. ವನವಾಸಿಗಳು, ರೈತರ ಸಹಭಾಗಿತ್ವದ ಅರಣ್ಯಗಳ ನಿರ್ವಹಣಾ ಯೋಜನೆ ಜಾರಿಮಾಡಬೇಕು ಎಂದು ಒತ್ತಾಯಿಸುವುದಾಗಿ ಆಂದೋಲನ ತಿಳಿಸಿದೆ.  
ಪಶ್ಚಿಮಘಟ್ಟದ ಕುರಿತ ನೀತಿ ನಿರೂಪಣೆಯಲ್ಲಿ ರೈತರು, ವನವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ. ಅವರ ಪಾರಂಪರಿಕ ಹಕ್ಕಿಗೆ ದಕ್ಕೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ಆದರೆ ಬೃಹತ್ ಗಣಿಗಾರಿಕೆಗೆ, ಬೇಕಾಬಿಟ್ಟಿ ಅಕ್ರಮ ಮರಳುಗಾರಿಕೆ, ಬೃಹತ್ ಮಿನಿಡ್ಯಾಂಗಳ ಸರಮಾಲೆ ನಿರ್ಮಿಸಲು ಅವಕಾಶ ನೀಡಬಾರದು.
 ಜನತೆ ಅರಣ್ಯ ನಿರ್ವಹಣೆಯಲ್ಲಿ ಪಾಲ್ಗೊಳ್ಳುವಂತೆ ಅವಕಾಶ ಇರಬೇಕು.  
ಪಶ್ಚಿಮ ಘಟ್ಟದಲ್ಲಿ ಬೃಹತ್‌ಗಣಿಗಾರಿಕೆ ನಿಷೇಧ ಮಾಡಬೇಕು ಎಂಬ ಪಶ್ಚಿಮಘಟ್ಟ ಕಾರ್ಯಪಡೆಯ ಪ್ರಮುಖ ಶಿಫಾರಸನ್ನು ರಾಜ್ಯ ಸರ್ಕಾರ ತಾತ್ವಿಕವಾಗಿ ಈ ಹಿಂದೆ ಒಪ್ಪಿತ್ತು. ಈಗ ಸರ್ಕಾರ ಪಶ್ಚಿಮಘಟ್ಟದಲ್ಲಿ ಬೃಹತ್‌ಗ ಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಬೇಕು ಎಂದು ಎಂದು ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement