ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾಸಿಕ 15 ಸಾವಿರ ವೇತನ ನೀಡಿ

Lingaraj Badiger
Updated On : 10 Jan 2014, 12:18 pm

ಕನ್ನಡಪ್ರಭ ವಾರ್ತೆ, ಸಾಗರ, ಜ.9
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಸಾಗರ ಘಟಕದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ನೌಕರರು ಕಳೆದ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸಾಮಾಜಿಕ, ಉದ್ಯೋಗ ಭದ್ರತೆ ಇಲ್ಲವಾಗಿದೆ. ಸರ್ಕಾರ ನೀಡುತ್ತಿರುವ ವೇತನ ಕನಿಷ್ಠ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕ್ರಮವಾಗಿ ಸಿ ಮತ್ತು ಡಿ ಗ್ರೂಪ್ ನೌಕರರು ಎಂದು ಪರಿಗಣಿಸಿ, ಅವರಿಗೆ ತಿಂಗಳಿಗೆ 15 ಸಾವಿರ ವೇತನ ಕೊಡಬೇಕು ಎಂದು ಮನವಿಯಲ್ಲಿ ಕೇಳಲಾಗಿದೆ.
ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನ ಸಂಭಾವನೆ ತಕ್ಷಣದಿಂದ ಜಾರಿಗೆ ಬರಬೇಕು. ಮಿನಿ ಅಂಗನವಾಡಿ ಕೇಂದ್ರಕ್ಕೆ ಸಹಾಯಕಿಯರನ್ನು ನೇಮಿಸಬೇಕು. ಅಂಗನವಾಡಿಗಳನ್ನು ಖಾಸಗಿಯವರಿಗೆ ವಹಿಸುವ ನಿರ್ಧಾರ ಕೈಬಿಡಬೇಕು. ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 6 ತಿಂಗಳ ಹೆರಿಗೆ ರಜೆ ಮತ್ತು ಎಲ್ಲ ರೀತಿಯ ಸೌಲಭ್ಯ ಕೊಡಬೇಕು. ನಿವೃತ್ತರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಕೇಳಲಾಗಿದೆ.
ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಯನ್ನು ತಕ್ಷಣ ಭರ್ತಿ ಮಾಡಬೇಕು. ಕಾಂಟಿಜೆನ್ಸಿ ಹಣ ಹೆಚ್ಚು ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲೆ ಹೆಚ್ಚುತ್ತಿರುವ ಕಿರುಕುಳ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಫೆಡರೇಶನ್ ತಾಲೂಕು ಅಧ್ಯಕ್ಷೆ ಭಾರತಿ ಎಚ್.ನಾಯಕ್, ಕಾರ್ಯದರ್ಶಿ ಸವಿತಾ ಜಿ.ಟಿ., ಪುಷ್ಪಾ, ನಾಗರತ್ನ, ಟಿ.ಎನ್. ಮಹಾಲಕ್ಷ್ಮೀ, ಶಾಂತಮ್ಮ ದಾಸಕೊಪ್ಪ, ಶಿವಕುಮಾರಿ ಹಾಜರಿದ್ದರು.

ಆರೋಪಿಗಳ ಬಂಧನಕ್ಕೆ ಆಗ್ರಹ
ಶಿವಮೊಗ್ಗ: ಹಾರೆಕಟ್ಟೆ ಗಂಗಾಧರ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸುವಲ್ಲಿ ರಕ್ಷಣಾ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ನವಚೈತನ್ಯ ಕರ್ನಾಟಕ ಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಗಂಗಾಧರ ಅವರ ತಂದೆ ಅ.26ರಂದು ಜಿಲ್ಲಾ ರಕ್ಷಣಾಧಿಕಾರಿಯವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರೂ, ಈವರೆಗೆ ಆರೋಪಿಗಳನ್ನು ಬಂಧಿಸುವುದಾಗಲೀ ವಿಚಾರಣೆ ಮಾಡುವ ಕಾರ್ಯವಾಗಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನ. ದೂರುಕೊಟ್ಟ 36 ದಿನದ ತರುವಾಯ ಹಾಲಪ್ಪನವರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೊಂದು ದೂರನ್ನು ಡಿ.3ರಂದು ಪಡೆದು ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸದೇ ಇರುವುದನ್ನು ಗಮನಿಸಿದರೆ ಅನುಮಾನ ಸೃಷ್ಟಿಯಾಗುತ್ತಿದೆ. ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು, ಆರೋಪಿಗಳು ಸಾಕ್ಷಿ ನಾಶದಂತಹ ಚಟುವಟಿಕೆಗೆ ಕೈ ಹಾಕದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು. ನಾಗೇಶ್, ವಿಜಯಮೆನನ್, ನಟೇಶ್ ಸೋಗಾನೆ, ಕೆ.ಟಿ. ಪ್ರತಾಪ ಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement