ಮೆಕ್ಕೆಜೋಳ ಖರೀದಿಗೆ ನಕಾರ: ಅಧಿಕಾರಿಗಳಿಗೆ ದಿಗ್ಬಂಧನ
ಶಿವಮೊಗ್ಗ: ಮೆಕ್ಕೆಜೋಳ ಖರೀದಿ ಮಾಡುತ್ತಿಲ್ಲ ಎಂದು ಆರೋಪಿಸಿ ರೈತರು ನಗರದ ಎಪಿಎಂಸಿಯಲ್ಲಿರುವ ಖರೀದಿ ಕೇಂದ್ರದ ಎದುರು ಗುರುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಮೆಕ್ಕೆಜೋಳವನ್ನು ಖರೀದಿ ಕೇಂದ್ರಕ್ಕೆ ತಂದರೆ ಇಲ್ಲಿ ವಾರಗಟ್ಟಲೆ ಕಾಯಬೇಕಾಗಿದೆ. ಸರದಿ ಬಂದಾಗ ಕಳಪೆ ಗುಣಮಟ್ಟದ ನೆಪ ಹೇಳಿ ಖರೀದಿಸುತ್ತಿಲ್ಲ. ಹೀಗಾಗಿ, ನಾವು 20-25 ದಿನ ಕಾದು, ಲಾರಿ ಬಾಡಿಗೆ ನೀಡಿ ಮಾರುವುದಕ್ಕಿಂತ ರಸ್ತೆಗೆ ಚಲ್ಲಿ ಹೋಗುವುದೇ ಮೇಲು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾದು ಸುಸ್ತಾದ ರೈತರು ಮಧ್ಯವರ್ತಿಗಳಿಗೆ ಮೆಕ್ಕೆಜೋಳ ಮಾರಾಟ ಮಾಡಿ ಹೋಗಲಿ ಎಂಬುದು ಸರ್ಕಾರಿ ಅಧಿಕಾರಿಗಳ ಉದ್ದೇಶ ಎಂದು ಆರೋಪಿಸಿದರು.
ಪ್ರತಿಭಟನೆಗೆ ಪ್ರತಿಕ್ರಿಯೆ ಸಿಗದ ಕಾರಣ ಖರೀದಿ ಕೇಂದ್ರದಲ್ಲಿದ್ದ ಅಧಿಕಾರಿಗಳನ್ನು ಕೆಲಕಾಲ ಕೂಡಿ ಹಾಕಿದರು. ಕೊನೆಗೆ ಬೀಗ ತೆರೆದು ಬಿಡುಗಡೆ ಮಾಡಿದರು.
ಇತ್ತ ಅಧಿಕಾರಿಗಳು, ಕಳಪೆ ಗುಣಮಟ್ಟ ಕಂಡುಬಂದ ಕಾರಣ ಖರೀದಿ ಮಾಡಿಲ್ಲ ಎಂದಿದ್ದಾರೆ. ಇದರಿಂದಾಗಿ ಎಪಿಎಂಸಿಯಲ್ಲಿ ಸುಮಾರು 40 ಲಾರಿಗಳು ನಿಂತಿದ್ದು, ಗೋದಾಮಿನ ಎದುರು 75ಕ್ಕೂ ಹೆಚ್ಚು ಲಾರಿಗಳು ನಿಂತಿವೆ.