'60 ಜನರಿಗೆ ವಸತಿ ಸೌಲಭ್ಯ'
ಸಾಗರ: ನಗರಸಭೆ ವ್ಯಾಪ್ತಿಯಲ್ಲಿ ವಾಜಪೇಯಿ ವಸತಿ ಯೋಜನೆಯಡಿ ತಲಾ ರು. 2 ಲಕ್ಷದಂತೆ 60 ಜನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ 2014-15ನೇ ಸಾಲಿನ ವಾರ್ಷಿಕ ಬಜೆಟ್ ತಯಾರಿ ಸಂಬಂಧ ಸಂಬಂಧ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ವಾಜಪೇಯಿ ವಸತಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಇನ್ನಷ್ಟು ಮನೆ: ಯೋಜನೆಯಡಿ ಇನ್ನಷ್ಟು ಮನೆ ನೀಡುವ ಉದ್ದೇಶ ಹೊಂದಲಾಗಿದ್ದು, ಪ್ರತಿ ವಾರ್ಡ್ನಲ್ಲಿ ನಿವೇಶನರಹಿತ ಫಲಾನುಭವಿಗಳನ್ನು ಗುರುತಿಸಲು ಅಧಿಕಾರಿಗಳೊಂದಿಗೆ ನಗರಸಭೆ ಸದಸ್ಯರು ತಕ್ಷಣ ಕ್ರಮ ಕೈಗೊಳ್ಳಬೇಕು. ಯೋಜನೆಯಡಿ ಮನೆ ಕಟ್ಟಿಕೊಳ್ಳುವಾಗ ವ್ಯವಸ್ಥಿತ ರೀತಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಫಲಾನುಭವಿಗಳು ನಿಯಮಾವಳಿಗಳನ್ನು ಮೀರಿ ಎಲ್ಲೆಂದರಲ್ಲಿ ಮನೆ ಕಟ್ಟಿಕೊಳ್ಳಬಾರದು ಎಂದು ಸಲಹೆ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಉದ್ಯಾನವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ರು. 30 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ರು. 15 ಕೋಟಿ ಅನುದಾನ ಬಂದಿದ್ದು, ರು. 15 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ. ಉದಯ ಕುಮಾರ್ ಶೆಟ್ಟಿ, ನಗರವನ್ನು ಮಾದರಿಯಾಗಿ ನಿರ್ಮಿಸುವ ನಿಟ್ಟಿನಲ್ಲಿ ಬಜೆಟ್ಟಿನಲ್ಲಿ ಅಗತ್ಯ ಹಣ ಮೀಸಲಿಡಲಾಗುವುದು. ನಗರಸಭೆ ಸದಸ್ಯರು ನೀಡಿರುವ ಅಭಿಪ್ರಾಯದಂತೆ ನೀರಿನ ತೆರಿಗೆ ಹಾಗೂ ಸ್ವಯಂಘೋಷಿತ ಆಸ್ತಿ ತೆರಿಗೆ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಲ್ಲಿಗಳಿಗೆ ಮೀಟರ್ ಅಳವಡಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪೌರಾಯುಕ್ತ ಬಿ.ಎ.ಚಂದ್ರಶೇಖರ್ ಮೊದಲಾದ ಅಧಿಕಾರಿಗಳು ಹಾಜರಿದ್ದರು.