ನನ್ನ ಜವಾಬ್ದಾರಿ ಇನ್ನೂ ಮುಗಿದಿಲ್ಲ
ಕ.ಪ್ರ.ವಾರ್ತೆ ಸಾಗರ ಜ.10
ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಪೂರೈಸಿಕೊಂಡು ಶುಕ್ರವಾರ ಸಾಗರಕ್ಕೆ ಆಗಮಿಸಿದ ಸಾಹಿತಿ ಡಾ.ನಾ.ಡಿಸೋಜ ಅವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಇಷ್ಟು ವರ್ಷ ಸಾಹಿತ್ಯ ಸಮ್ಮೇಳನವನ್ನು ದೂರ ನಿಂತು ನೋಡುತ್ತಿದ್ದೆ. ಈ ಬಾರಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಲ್ಲಿ ಕುಳಿತು ನಿಭಾಯಿಸಿರುವುದು ಒಂದು ಅದ್ಭುತವಾದ ಅನುಭವವನ್ನು ಕಟ್ಟಿಕೊಟ್ಟಿದೆ. ಸಮ್ಮೇಳನದ ಕೇಂದ್ರಬಿಂದುವಾಗಿ ಅನುಭವಿಸಿದ ಕ್ಷಣಗಳು ನಿಜಕ್ಕೂ ಸಂತೋಷದಾಯಕವಾಗಿತ್ತು ಎಂದು ನಾಡಿ ಸಮ್ಮೇಳನದ ಅನುಭವ ಹಂಚಿಕೊಂಡರು.
ನಿರ್ಣಯ ಜಾರಿಗೆ ಒತ್ತಡ: ರಾಜ್ಯದ ಬೇರೆ ಬೇರೆ ಭಾಗಗಳಿಂದ ಸಾಹಿತ್ಯಾಭಿಮಾನಿಗಳು ಮಂಜಿನ ನಗರಿಗೆ ಬಂದು ಕನ್ನಡ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ನನ್ನ ಜೊತೆ ಪ್ರೀತಿಯಿಂದ ಬೆರೆಯುತ್ತಿದ್ದ ಗಳಿಗೆಗಳು ರೋಮಾಂಚನ ಉಂಟು ಮಾಡಿದೆ.
ಈಗಾಗಲೇ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಮೇಲೆ ಒತ್ತಡ ತರುವ ಜವಾಬ್ದಾರಿಯನ್ನು ಪರಿಷತ್ ವಹಿಸಿಕೊಂಡಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಕಾಲಮಿತಿಯೊಳಗೆ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದಾರೆ ಎಂದರು.
ಸಮ್ಮೇಳನದಲ್ಲಿ ಸಂಯೋಜಕರ ಅನುಭವದ ಕೊರತೆಯಿಂದಾಗಿ ಸಣ್ಣಪುಟ್ಟ ಲೋಪಗಳು ನಡೆದಿದ್ದು, ಅದನ್ನು ನಾನು ನೆನಪಿಟ್ಟುಕೊಳ್ಳುವುದಿಲ್ಲ. ಕೊಡವ ಸಂಸ್ಕೃತಿಯ ಅನಾವರಣ, ಪುಸ್ತಕ ಮಾರಾಟ, ಸಣ್ಣ ಊರಾದರೂ ಅಲ್ಲಿನವರು ಕನ್ನಡಪ್ರೇಮಿಗಳಿಗೆ ಕಲ್ಪಿಸಿದ ಸೌಲಭ್ಯಗಳು ದಾಖಲಿಸುವಂಥದ್ದು ಎಂದು ಹೇಳಿದರು.
ಜವಾಬ್ದಾರಿ ಮುಗಿದಿಲ್ಲ: ಸಮ್ಮೇಳನ ಮುಗಿದ ತಕ್ಷಣ ನನ್ನ ಜವಾಬ್ದಾರಿ ಮುಗಿದಿಲ್ಲ. ಕನ್ನಡವನ್ನು ಪ್ರಸಾರ ಮಾಡುವ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ. ಹಿಂದೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಬೇರೆಬೇರೆ ಕಡೆ ಕರೆದುಕೊಂಡು ಹೋಗಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದರು.
ಅದು ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರು ಸಹ ಈ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಸಮ್ಮೇಳನಾಧ್ಯಕ್ಷನಾಗಿ ನಾನು ಮುಂದಿನ ದಿನಗಳಲ್ಲಿ ಸ್ಥಾವರವಾಗಲು ಇಷ್ಟಪಡದೆ, ಜಂಗಮರಂತೆ ಕನ್ನಡವನ್ನು ಮನೆಮನದಲ್ಲಿ ಕಟ್ಟುವ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಕಾರ್ಯದರ್ಶಿಗಳಾದ ವಿ.ಶಂಕರ್, ಜಿ.ನಾಗೇಶ್, ನಿರ್ದೇಶಕರಾದ ದೀಪಕ್ ಸಾಗರ್, ಜಿ.ಯೋಗೀಶ್, ಉಮೇಶ್ ಹಿರೇನೆಲ್ಲೂರು, ಲೋಕೇಶಕುಮಾರ್, ಜನಪದ ಕಲಾವಿದ ಬಿ.ಟಾಕಪ್ಪ, ಉಮೇಶ್, ಡಾ.ವೆಂಕಟೇಶ್ ಜೋಯಿಸ್, ಮ.ಸ.ನಂಜುಂಡಸ್ವಾಮಿ, ವಿಲಿಯಂ ಹಾಜರಿದ್ದರು.