16ರಂದು ಕೃಷಿ ಉತ್ಸವಕ್ಕೆ ಚಾಲನೆ
ಕ.ಪ್ರ.ವಾರ್ತೆ ಭದ್ರಾವತಿ ಜ. 11
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಗಳ ಆಶ್ರಯದಲ್ಲಿ ಪಟ್ಟಣದ ಕನಕಮಂಟಪ ಮೈದಾನದಲ್ಲಿ ಗುರುವಾರ ಮತ್ತು ಶುಕ್ರವಾರ ಕೃಷಿ ಉತ್ಸವ-2014 ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೇಂದ್ರ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಲಿದೆ ಎಂದು ಯೋಜನೆಯ ಯೋಜನಾಧಿಕಾರಿ ಎಂ.ದಿನೇಶ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೃಷಿ ಉತ್ಸವವನ್ನು ಜ.16ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು. ಭದ್ರಾವತಿಯ ಶಾಸಕ ಎಂ.ಜೆ.ಅಪ್ಪಾಜಿ ಅಧ್ಯಕ್ಷತೆ ವಹಿಸುವರು.
ಒಕ್ಕೂಟದ ಕೇಂದ್ರ ಸಮಿತಿಯ ಪದಾಧಿಕಾರಿಗಳಿಗೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಮಾಣ ವಚನ ಬೋಧಿಸುವರು.
ಕೃಷಿ ಉತ್ಸವದ ವಸ್ತುಪ್ರದರ್ಶನ ಮಳಿಗೆಗಳನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಹಾಗೂ ತಹಸೀಲ್ದಾರ್ ಸಿದ್ದಮಲ್ಲಪ್ಪ ಆಗಮಿಸುವರು ಎಂದು ತಿಳಿಸಿದರು.
ಸಮಾರೋಪ: ಅಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆರ್.ಕರುಣಾಮೂರ್ತಿ ವಹಿಸುವರು. ಮುಖ್ಯ ಅತಿಥಿಗಳಾಗಿ ಯೋಜನೆಯ ನಿರ್ದೇಶಕ ಸುಧೀರ್ಕುಮಾರ್ ಬಂಟ್ವಾಳ್, ಪೌರಾಯುಕ್ತ ಬಿ.ಡಿ.ಬಸವರಾಜಪ್ಪ ಮತ್ತು ಡಿವೈಎಸ್ಪಿ ಸದಾನಂದ ಬಿ.ನಾಯಕ್ ಆಗಮಿಸುವರು ಎಂದು ತಿಳಿಸಿದರು.
ಆಸನ-ಭೋಜನ: ಮುಖ್ಯ ಪೆಂಡಾಲಿನಲ್ಲಿ 2500 ಜನರು ಕೂರಲು ಆಸನಗಳನ್ನು ಹಾಕಲಾಗುವುದು. ಪ್ರತಿದಿನ ಮಧ್ಯಾಹ್ನ 15000 ಜನರಿಗೆ ಬಿಇಒ ಕಚೇರಿ ಹಿಂದೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಬೆಳೆಗಾರನಿಗೆ ಹೆಚ್ಚಿನ ಲಾಭ ದೊರಕಬೇಕೆಂದು ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯ. ಇದೇ ಧ್ಯೇಯದಿಂದ ಕೃಷಿ ಉತ್ಸವ ನಡೆಸಲಾಗುತ್ತಿದೆ ಎಂದು ಕರುಣಾಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಕಾರ್ಯದರ್ಶಿ ಧರ್ಮಪ್ರಸಾದ್, ಕೋಶಾಧ್ಯಕ್ಷ ಜಿ.ಆನಂದಕುಮಾರ್, ನರಹರಿ ಶರ್ಮ, ಮಾರುತಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ
ಶಿವಮೊಗ್ಗ: ಸರ್ಕಾರಿ ಪದವಿ ಪೂರ್ವ ಕಾಲೇಜು ಜ.13ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಮಾರೋಪ ಸಮಾರಂಭ ಏರ್ಪಡಿಸಿದೆ. ಉದ್ಘಾಟನೆಯನ್ನು ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೆರವೇರಿಸುವರು.