ಇಂದು ವಿವೇಕಾನಂದರ ಪ್ರತಿಮೆ ಅನಾವರಣ
ಕ.ಪ್ರ.ವಾರ್ತೆ ಶಿವಮೊಗ್ಗ ಜ. 11
ಮತ್ತೂರಿನ ಶ್ರೀ ಶಾರದಾ ವಿಲಾಸ ಶಾಲಾ ಆವರಣದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಬೃಹತ್ ಪ್ರತಿಮೆ ಭಾನುವಾರ ಅನಾವರಣಗೊಳ್ಳುತ್ತಿದೆ.
ಶ್ರೀ ಶಾರದಾ ಶಾಲಾಭಿವೃದ್ಧಿ ಸಮಿತಿಯು 50ನೇ ವರ್ಷದ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಪ್ರತಿಮೆಯನ್ನು ನಿರ್ಮಿಸಿದ್ದು, ನಗರ ವ್ಯಾಪ್ತಿಯ ಯಾವುದೇ ಶಾಲೆಗಳಲ್ಲಿರದ ಅತ್ಯಂತ ಎತ್ತರವಾದ ಪ್ರತಿಮೆ ಇದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುಮಾರು 14.5 ಅಡಿ ಎತ್ತರದ ಈ ಪ್ರತಿಮೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಸುಮಾರು 4 ಅಡಿ ಎತ್ತರದ ಕಟ್ಟೆಯ ಮೇಲೆ ಫೈಬರ್ನಿಂದ ತಯಾರಿಸಲಾಗಿರುವ ಈ ಪ್ರತಿಮೆಯನ್ನು ನಗರದ ಕಲಾ ಭವನ ಸಂಸ್ಥೆಯ ಬಿ.ಜೆ. ರಾಜಶೇಖರ್ ತಂಡ ಸಿದ್ಧಪಡಿಸಿದೆ.
ಮೂರ್ತಿ ಸಿದ್ಧಪಡಿಸಲು ಲಕ್ಷಾಂತರ ರುಪಾಯಿ ವೆಚ್ಚ ಮಾಡಲಾಗಿದ್ದು, ಹಳೇ ವಿದ್ಯಾರ್ಥಿಗಳು, ಸಿಬ್ಬಂದಿ, ಆಡಳಿತ ಮಂಡಳಿ ಈ ವೆಚ್ಚ ಭರಿಸಿದೆ.
ಶೋಭಾ ಯಾತ್ರೆ: ಪ್ರತಿಮೆ ಅನಾವರಣಕ್ಕೆ ಮುನ್ನ ಗ್ರಾಮದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ನೂರಾರು ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಮಹಿಳಾ ಸಂಘಟನೆಗಳು, ಕಲಾ ತಂಡಗಳು, ವಾದ್ಯ ತಂಡಗಳು ಭಾಗವಹಿಸುತ್ತಿರುವುದು ವಿಶೇಷ. ಇದಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್. ಸುಧೀಂದ್ರ, ಚಿತ್ರಕಲಾ ಶಿಕ್ಷಕ, ಆಡಳಿತ ಮಂಡಳಿ ಪದಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಅಂದು ಮಧ್ಯಾಹ್ನ 2.30ಕ್ಕೆ ಗ್ರಾಮ ಪಂಚಾಯಿತಿ ಆವರಣದಿಂದ ಶಾರದಾ ಶಾಲೆವರೆಗೆ ಮೆರವಣಿಗೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಂಘ ಚಾಲಕ ಎಂ.ಆರ್. ರಾಜಾರಾಮ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕೃ. ಸೂರ್ಯನಾರಾಯಣ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಾಜು, ಉಪಾಧ್ಯಕ್ಷ ಗೋಪಾಲ ಅವಧಾನಿ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿರುವರು.