'ಉಪಯೋಗವಾಗದ ಖರೀದಿ ಕೇಂದ್ರ'
ಕ.ಪ್ರ.ವಾರ್ತೆ ಸೊರಬ ಜ. 11
ತಾಲೂಕಿನ ಆನವಟ್ಟಿಯ ಎಪಿಎಂಸಿ ಆವರಣದಲ್ಲಿರುವ ಭತ್ತ ಹಾಗೂ ಮೆಕ್ಕೆ ಜೋಳದ ಖರೀದಿ ಕೇಂದ್ರ ರೈತರ ಪಾಲಿಗೆ ಇದ್ದರೂ ಇಲ್ಲದಾಂತಾಗಿದೆ ಎಂದು ರಾಜ್ಯ ರೈತ ಸಂಘದ ಸಹ ಕಾರ್ಯದರ್ಶಿ ಡಿ. ಶಿವಪ್ಪ ಆರೋಪಿಸಿದ್ದಾರೆ.
ಒಂದೆಡೆ ರೈತರನ್ನು ಕಾಡುವ ಬೆಲೆಯ ಇಳಿಕೆ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆಯೊಂದಿಗೆ ಸರ್ಕಾರದ ನೆರವು ಸಹ ರೈತರ ಪಾಲಿಗೆ ಮುಚ್ಚಿದಂತೆ ಆಗಿದೆ.
ಈ ಮೊದಲು ಬಗರ್ಹುಕುಂ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಖರೀದಿಸಲು ನಿರಾಕರಿಸುತ್ತಿದ್ದ ಅಧಿಕಾರಿಗಳು ಈಗ ರೈತರ ಯಾವುದೇ ಬೆಳೆಯನ್ನು ಖರೀದಿ ಮಾಡದೇ, ಮಧ್ಯವರ್ತಿಗಳಿಗೆ ಲಾಭ ಮಾಡಿಕೊಡುವ ಹುನ್ನಾರ ನಡೆಸಿದ್ದಾರೆ. ಕೇಂದ್ರದಲ್ಲಿ ಮಾರಾಟದಿಂದ ವಂಚಿತರಾದ ಬಡ ರೈತರು ಅನಿವಾರ್ಯವಾಗಿ ಖಾಸಗಿ ವ್ಯಾಪಾರಸ್ಥರಿಗೆ ಅವರು ಕೇಳಿದ ಬೆಲೆಗೆ ಬೆಳೆ ಮಾರಾಟ ಮಾಡಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ ಎಂದು ದೂರಿರುವ ಅವರು ತಾಲೂಕು ತಹಸೀಲ್ದಾರರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರ, ಸ್ಥಳೀಯ ಶಾಸಕರು ಇತ್ತ ಗಮನ ಹರಿಸದಿದ್ದರೆ ರೈತರಿಗೆ ತೀವ್ರ ಸಂಕಷ್ಟ ತಪ್ಪಿದ್ದಲ್ಲ ಎಂದಿರುವ ಅವರು, ಕೂಡಲೇ ಖರೀದಿಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.