ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕನಿಷ್ಠ ಸೌಕರ್ಯವಿಲ್ಲದ ಕೂಲಿ ಕಾರ್ಮಿಕರು

Rashmi Kasaragodu
Updated On : 12 Jan 2014, 12:51 pm

ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಇದೊಂದು ಪ್ರತ್ಯೇಕ ಪ್ರಪಂಚ. ಎಲ್ಲಿ ನೋಡಿದರಲ್ಲಿ ಬಗೆದಿರುವ ನೆಲ. ಇಲ್ಲಿಗೆ ಹೊರಗಿನವರು ಪ್ರವೇಶ ಪಡೆಯುವುದು ಕಷ್ಟಸಾಧ್ಯ. ಧೂಳಿನ ಜತೆಗೇ ಇವರ ಬದುಕು. ಕನಿಷ್ಠ ಸೌಕರ್ಯವಿಲ್ಲದೇ ಇಲ್ಲಿ ಜನರಿದ್ದಾರೆ. ಇದು ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುತ್ತಿರುವವರ ಜೀವನ.
ಕಾರ್ಮಿಕರು ವಲಸೆ ಹೋಗುವುದನ್ನು ತಡೆಗಟ್ಟಲು ಸರ್ಕಾರ 1ಗೆ ಕಿಲೋ ಅಕ್ಕಿ ಕೊಡುತ್ತಿದೆ. ಉದ್ಯೋಗಖಾತ್ರಿಯಂತಹ ಯೋಜನೆಗಳನ್ನು ತಂದಿದೆ. ಈ ಯೋಜನೆಯಡಿ ಈಗ 200 ವರೆಗೆ ಕೂಲಿ ಸಿಗುತ್ತದೆ. ಆದರೂ ವಲಸೆ ತಡೆಯಲು ಆಗುತ್ತಿಲ್ಲ. ಬಹುತೇಕರು ಹೈದರಬಾದ್ ಕರ್ನಾಟಕ ಅಥವಾ ಉತ್ತರ ಕರ್ನಾಟಕದಿಂದ ಇಂತಹ ಕ್ವಾರಿಗಳಿಗೆ ವಲಸೆ ಬಂದಿದ್ದಾರೆ.
ಕೆಲವರು ಕೆಲಸ ಹುಡುಕಿಕೊಂಡು ಕಾಫಿ ತೋಟಗಳಿಗೆ ಹೋದರೆ, ಇನ್ನೂ ಕೆಲವರು ಇಂತಹ ಕಲ್ಲು ಕ್ವಾರಿಗಳನ್ನು ಆರಿಸಿಕೊಳ್ಳುತ್ತಾರೆ. ಬಂಡೆ ಕಲ್ಲುಗಳನ್ನು ಕುಟ್ಟಿ, ಟ್ರ್ಯಾಕ್ಟರ್ಗಳಲ್ಲಿ ತುಂಬಿ ಪಕ್ಕದಲ್ಲೇ ಇರುವ ಕ್ರಷರ್ಗೆ ಕಳುಹಿಸುತ್ತಾರೆ. ಅಲ್ಲಿ ಜಲ್ಲಿಯಾಗುವ ಈ ಕಲ್ಲು ಊರುಗಳನ್ನು ತಲುಪುತ್ತದೆ. ಇದರಿಂದಲೇ ಸುಂದರ ಮನೆಗಳು ನಿರ್ಮಾಣವಾಗುತ್ತವೇ. ಆದರೆ, ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಗೋಳು ಕೇಳುವವರಿಲ್ಲ.
ಶಿವಮೊಗ್ಗ ಸುತ್ತಮುತ್ತ ಪ್ರತ್ಯೇಕ ರಾಜ್ಯಗಳಂತೆ ಇರುವ ಕಲ್ಲುಗಂಗೂರು, ಗೆಜ್ಜೇನಹಳ್ಳಿ, ಕೋಟೆಗಂಗೂರು ಹಾಗೂ ಇತರೆ ಸ್ಥಳಗಳಲ್ಲಿ ಇರುವ ಎಲ್ಲಾ ಕಲ್ಲುಕ್ವಾರಿಗಳಲ್ಲೂ ಇದೇ ಸ್ಥಿತಿ ಇದೆ.
ಕೋಳಿ ಗೂಡು: ಈ ಕಾರ್ಮಿಕರು ಕಲ್ಲು ಕ್ವಾರಿ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ. ಪಕ್ಕದಲ್ಲೇ ಇರುವ ಶೆಡ್ಗಳು ಕೋಳಿ ಗೂಡಿಗೂ ಸಮ ಇಲ್ಲ. ಕಲ್ಲುಗಂಗೂರು ಪ್ರದೇಶಕ್ಕೆ -ಕನ್ನಡಪ್ರಭ- ಭೇಟಿ ನೀಡಿದಾಗ ಇಲ್ಲಿ ನರಕ ದರ್ಶನವಾಗಿತ್ತು. ಅಡಿಪಾಯವಿಲ್ಲದೇ ಸಿಮೆಂಟ್ ಇಟ್ಟಿಗೆಯಿಂದ ಕಟ್ಟಿದ 10-12 ಮನೆಗಳು ಒಂದೆಡೆ ಇದ್ದರೆ, ಇನ್ನೊಂದೆಡೆ ಸುಮಾರು 10 ಟೆಂಟ್ ಗಳಿದ್ದವು. ಇಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.
ಸ್ವಚ್ಛ ಕುಡಿಯುವ ನೀರಿಲ್ಲ: ಸ್ವಚ್ಛತೆ ಎನ್ನುವುದು ಇಲ್ಲಿ ಮರೀಚಿಕೆ. ಪಕ್ಕದಲ್ಲಿಯೇ ಕ್ವಾರಿ ಹಾಗೂ ಕ್ರಷರ್ ಇರುವುದರಿಂದ ಧೂಳು ಹಾರಿಬರುತ್ತಲೇ ಇರುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಳಸಿದ ನೀರು ಇವರು ವಾಸಿಸುತ್ತಿರುವ ಕೋಣೆಯ ಎದುರಿನ ಗುಂಡಿಯಲ್ಲೇ ಸಂಗ್ರಹವಾಗಿದೆ.
ಇಂತಹ ಸ್ಥಳದಲ್ಲಿ ಕಡ್ಡಾಯವಾಗಿ ಇರಬೇಕಾದ ಶುಶ್ರೂಷಾ ಕೇಂದ್ರ ಇಲ್ಲವೇ ಇಲ್ಲ. ಈ ಕುಟುಂಬಕ್ಕೆ ಸೇರಿದ 50ಕ್ಕೂ ಹೆಚ್ಚು ಮಕ್ಕಳು ಇದ್ದರೂ ಅವರಿಗೆ ಶಿಕ್ಷಣಕ್ಕಾಗಿ ಬೇಕಾದ ಕನಿಷ್ಠ ಟೆಂಟ್ ಶಾಲೆಯೂ ಇಲ್ಲಿರಲಿಲ್ಲ.
ಕೂಲಿ ಅತ್ಯಲ್ಪ: ಬಂಡೆಯನ್ನು ಬ್ಲಾಸ್ಟ್ ಮಾಡಿ, ಕೊರೆದು, ಸುತ್ತಿಗೆಯಿಂದ ಕಲ್ಲು ಒಡೆದು ಒಂದು ಟ್ರಾಕ್ಟರ್ ಭರ್ತಿ ಮಾಡಿ ಕ್ರಷರ್ಗೆ ಕಳುಹಿಸುವುದು ಈ ಕಾರ್ಮಿಕರ ಕೆಲಸ. ಇದಕ್ಕಾಗಿ ಒಬ್ಬರಿಗೆ 150 ಸಿಗುತ್ತದೆ. ಸರ್ಕಾರ ನಿಗದಿಪಡಿಸಿದ ಕನಿಷ್ಟ ಕೂಲಿಯ ಹತ್ತಿರವೂ ಸಹ ಈ ಸಂಖ್ಯೆ ಸುಳಿಯುವುದಿಲ್ಲ. ಮನೆಮಂದಿಯೆಲ್ಲಾ ಈ ಕೆಲಸದಲ್ಲಿ ತೊಡಗಿರುತ್ತಾರೆ.
ಕಲ್ಲುಗಂಗೂರು ಪ್ರಕರಣದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನ್ ಪಾಟೀಲ್ ಹೇಳುವಂತೆ, ಇದು ಸರ್ಕಾರಿ ಭೂಮಿ. ಯಾರೂ ಅನುಮತಿ ಪಡೆದಿಲ್ಲ. ಇಂತಹ ಸ್ಥಳದಲ್ಲಿ ವರ್ಷಗಟ್ಟಲೆ ಅಕ್ರಮವಾಗಿ ಕ್ವಾರಿ ನಡೆಯುತ್ತಿದ್ದರೂ ಸಹ ಯಾರೂ ಗಮನಿಲ್ಲ. ಕಾರ್ಖಾನೆಗಳಲ್ಲಿ, ಮ್ಯಾನ್ ಪವರ್ ಏಜೆನ್ಸಿಯಿಂದ ನೇಮಕವಾಗಿರುವ ಕಾರ್ಮಿಕರನ್ನು, ಬಿಸಊಿಟ- ದಿನಗೂಲಿ ಕಾರ್ಮಿಕರನ್ನು ಕೇಳಲು ಸಂಘಟನೆಗಳು, ಜನಪ್ರತಿನಿಧಿಗಳು ಇದ್ದಾರೆ. ಆದರೆ, ಕಲ್ಲು ಕ್ವಾರಿಗಳಲ್ಲಿರುವ ಕಾರ್ಮಿಕರ ಕಷ್ಟ ಕೇಳುವವರ್ಯಾರು...?


ಕಲ್ಲು ಗಣಿ ಕಾರ್ಮಿಕರು ಕೇಂದ್ರ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಕಲ್ಲುಗಂಗೂರು ಕ್ವಾರಿ ಪ್ರದೇಶದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಮ್ಮ ಇಲಾಖೆ ಅಧಿಕಾರಿಗಳೂ ಇದ್ದರು. ಅವರಿಗೆ ನೋಟೀಸ್ ನೀಡಿದ್ದೇವೆ. ಅಲ್ಲದೇ ಜಿಲ್ಲೆಯ ಕಲ್ಲು ಕ್ವಾರಿಗಳ ಕಾರ್ಮಿಕರ ವಿಷಯವಾಗಿ ನಮ್ಮ ಇಲಾಖೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಲೇಬರ್ ಎನ್ ಫೋರ್ಸ್ಮೆಂಟ್ ಅಧಿಕಾರಿಯವರಿಗೆ ಪತ್ರ ಬರೆಯುತ್ತೇನೆ.
- ವಿಶ್ವನಾಥ್
ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement