ಬದಲಾವಣೆ ದಾರಿಯಲ್ಲಿ ಕೃಷಿ ಸಮಾಜ
ಹೊಸನಗರ: ಬದಲಾವಣೆ ಎಲ್ಲ ರಂಗದಲ್ಲೂ ಅನಿವಾರ್ಯವಾಗಿರುವುದರಿಂದ ಕೃಷಿ ಕ್ಷೇತ್ರದಲ್ಲೂ ಅದರ ಗಾಳಿ ಬೀಸುತ್ತಿದೆ ಎಂದು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೃಷಿ ಇಲಾಖೆ, ಕೃಷಿ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ ತಾಲೂಕುಮಟ್ಟದ ಕೃಷಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಂಸದ ರಾಘವೇಂದ್ರ ಮಾತನಾಡಿ, ಪೇಟೆಗಳತ್ತ ಹೊರಟ ಯುವ ಪೀಳಿಗೆಗೆ ಕೃಷಿ ಅಸಡ್ಡೆಯ ಮಾತಾಗಿದೆ. ಹಳ್ಳಿಗಳು ವೃದ್ಧಾಶ್ರಮ ಆಗುತ್ತಿರುವ ಈ ಹಂತದಲ್ಲಿ ಯುವಕರಲ್ಲಿ ಕೃಷಿ ಆಸಕ್ತಿ ಕೆರಳಿಸುವ ಕಾರ್ಯವಾಗಬೇಕಿದೆ ಎಂದರು. ವಸ್ತು ಪ್ರದರ್ಶನ ಡಾ. ಎಚ್.ಎಲ್, ಮಂಜುನಾಥ್ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ಗೀತಾ ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕೃಷಿಕರಿಗೇ ಮನ್ನಣೆ ಇಲ್ಲ: ಪಟ್ಟಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕೃಷಿ ಸಂಘಟನೆಯಲ್ಲಿ ದುಡಿಯುತ್ತಿರುವರನ್ನು ನಿರ್ಲಕ್ಷ ಮಾಡಿ ಕೃಷಿಕರಲ್ಲದವರಿಗೆ ಮಣೆ ಹಾಕಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಟೀಕಿಸಿದ್ದಾರೆ.