ರಸ್ತೆ, ಕಾಲುವೆ ನಿರ್ಮಾಣಕ್ಕೆ ಆಗ್ರಹ
ಶಿವಮೊಗ್ಗ: ಬೀರನಕೆರೆಯ ಕಲ್ಲುಕೋರೆ ಜಮೀನುಗಳಿಗೆ ರಸ್ತೆ, ಕಾಲುವೆ ಹಾಗೂ ಮೋರಿಗಳನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬೀರನಕೆರೆಯಲ್ಲಿ ಶೇ.90 ವ್ಯವಸಾಯ ಮಾಡುವ ಪರಿಶಿಷ್ಟ ರೈತರಿದ್ದು, ಅವರ ಜಮೀನುಗಳಿಗೆ ಹೋಗುವ ದಾರಿಗಳಿಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಗುಡ್ಡದ ನೀರು ರಸ್ತೆಯ ಮೇಲೆ ಹರಿಯುವುದರಿಂದ ರಸ್ತೆ ಹದಗೆಟ್ಟಿದೆ. ರಸ್ತೆ ಮಧ್ಯ ದೊಡ್ಡ ಗುಂಡಿ ಸಹ ಇದೆ. ಇದಕ್ಕೆ ಮೋರಿ ಇಲ್ಲದೆ, ಜಮೀನುಗಳ ಮೇಲೆ ನೀರು ಹರಿಯುತ್ತಿದೆ. ಈ ರಸ್ತೆಯಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್, ಜಾನುವಾರುಗಳು, ರೈತರು ಓಡಾಡಲು, ಗೊಬ್ಬರ ಇತ್ಯಾದಿ ತೆಗೆದುಕೊಂಡು ಹೋಗಲು ತುಂಬಾ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವ್ಯವಸ್ಥಿತ ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ರಸ್ತೆಗೆ ಜಲ್ಲಿ ಬಿಚಾವಣೆ ಮತ್ತು ರಸ್ತೆ ಅಕ್ಕಪಕ್ಕ ಚರಂಡಿ ಮಾಡಿಕೊಡಬೇಕು. ಹಳ್ಳಕ್ಕೆ ಒಂದು ಮೋರಿ ನಿರ್ಮಾಣ ಆಗಬೇಕಿದೆ. ಆದ್ದರಿಂದ ಜಿಲ್ಲಾಡಳಿತ ಸರ್ಕಾರದ ಅನುದಾನದಲ್ಲಿ ಇಲ್ಲಿಗೆ ರಸ್ತೆ ಮತ್ತು ಮೋರಿ ನಿರ್ಮಾಣ ಮಾಡಿಕೊಡಬೇಕು ಎಂದು ಸ್ಥಳೀಯ ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ರಘು, ಸಂತೋಷ್ ಮೊದಲಾದವರು ಇದ್ದರು.