16ರಂದು ಬೆಂಗಳೂರಿನಲ್ಲಿ ಶಿಕ್ಷಣ ತಜ್ಞರ ಸಭೆ: ಸಚಿವ ಕಿಮ್ಮನೆ ರತ್ನಾಕರ್
ಶಿವಮೊಗ್ಗ: ಮಾತೃಭಾಷಾ ಶಿಕ್ಷಣ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಜ.21ರಂದು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಜ.16ರಂದು ಬೆಂಗಳೂರಿನಲ್ಲಿ ಸಾಹಿತಿಗಳು, ಶಿಕ್ಷಣ ತಜ್ಞರ ಸಭೆ ಕರೆಯಲಾಗಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಸು ವ್ಯತಿರಿಕ್ತವಾಗಿ ತೀರ್ಮಾನವಾದರೆ ನಾನು ಪ್ರಪಾತಕ್ಕೆ ಬೀಳಬೇಕಾಗುತ್ತದೆ. ಏನು ತೀರ್ಪು ಬರುವುದೋ ಎಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಎಲ್ಲಾ ಪರಿಸ್ಥಿತಿಗೂ ಸಿದ್ಧರಾಗುತ್ತಿದ್ದೇವೆ. ಮಾಧ್ಯಮಿಕ ಶಿಕ್ಷಣ ಯೋಜನೆಗೆ ಒಳಪಡಲು ನಾಲ್ಕು ವರ್ಷ ಅವಕಾಶವಿತ್ತು. ಜ.13 ಅಂತಿಮ ದಿನ. ಇದುವರೆಗೆ ಯಾವ ಕ್ರಮವೂ ಆಗಿಲ್ಲ. ಹಾಗಾಗಿ ತ್ವರಿತ ಕ್ರಮ ಕೈಗೊಳ್ಳಲು ಸರಣಿ ಸಭೆ ನಡೆಸುತ್ತಿದ್ದೇವೆ ಎಂದರು.
ರಾಜಿನಾಮೆಗೆ ಸಿದ್ಧ: ಶಿಕ್ಷಕರ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಒಂದೇ ಒಂದು ಪ್ರಕರಣ ಸಾಬೀತಾದರೂ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧ. ಶಿಕ್ಷಕರ ವರ್ಗಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಚಿವರು ಆರೋಪಿಸುತ್ತಿದ್ದಾರೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಿ, ನಾನು ಉತ್ತರಿಸುತ್ತೇನೆ ಎಂದರೂ ಅವರು ಆರೋಪಗಳನ್ನು ಮುಂದುವರಿಸಿದ್ದಾರೆ. ನನ್ನಿಂದ ಭ್ರಷ್ಟಾಚಾರ ನಡೆದಿಲ್ಲ ಎಂಬುದು ಸಾಬೀತಾದಲ್ಲಿ ಅವರು ಸದನದ ಸದಸ್ಯತ್ವಕ್ಕೆ ರಾಜಿನಾಮೆ ನೀಡಲಿ ಎಂದರು.