16ರಂದು ಶಿಕ್ಷಣ ತಜ್ಞರ ಸಭೆ: ಕಿಮ್ಮನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 12
ಮಾತೃಭಾಷಾ ಶಿಕ್ಷಣ ಕುರಿತ ಸುಪ್ರೀಂಕೋರ್ಟ್ ತೀರ್ಪು ಜ. 21ರಂದು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಜ. 16ರಂದು ಬೆಂಗಳೂರಿನಲ್ಲಿ ಸಾಹಿತಿಗಳು, ಶಿಕ್ಷಣ ತಜ್ಞರ ಸಭೆ ಕರೆಯಲಾಗಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಸು ವ್ಯತಿರಿಕ್ತವಾಗಿ ತೀರ್ಮಾನವಾದರೆ ನಾನು ಪ್ರಪಾತಕ್ಕೆ ಬೀಳಬೇಕಾಗುತ್ತೆ. ಏನು ತೀರ್ಪು ಬರುವುದೋ ಎಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಎಲ್ಲಾ ಪರಿಸ್ಥಿತಿಗೂ ಸಿದ್ಧರಾಗುತ್ತಿದ್ದೇವೆ ಎಂದರು.
ಮಾಧ್ಯಮಿಕ ಶಿಕ್ಷಣ ಯೋಜನೆಗೆ ಒಳಪಡಲು ನಾಲ್ಕು ವರ್ಷ ಅವಕಾಶವಿತ್ತು. ಇದೇ ಜ. 13ರಂದು ಅಂತಿಮ ದಿನ. ಇದೂವರೆಗೆ ಯಾವ ಕ್ರಮವೂ ಆಗಿಲ್ಲ. ಹಾಗಾಗಿ ತ್ವರಿತ ಕ್ರಮ ಕೈಗೊಳ್ಳಲು ಸರಣಿ ಸಭೆ ನಡೆಸುತ್ತಿದ್ದೇವೆ ಎಂದರು. ಲೈಂಗಿಕ ಶಿಕ್ಷಣದ ಬಗ್ಗೆ ಅವರಿಗೆ ಪ್ರಶ್ನಿಸಿದಾಗ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೇ ಈ ವಿಷಯ ಇದೆ ಎಂದರು.
ಶಿಕ್ಷಣ ಇಲಾಖೆಯ ಒಂದೂ ಕಡತಗಳು ತಮ್ಮ ಕಚೇರಿಯಲ್ಲಿ ವಿಲೇವಾರಿಗೆ ಬಾಕಿ ಇಲ್ಲ ಎಂದು ಹೇಳಿದ ಸಚಿವ ಕಿಮ್ಮನೆ ರತ್ನಾಕರ್, ಇದರಲ್ಲಿ ಹಿಂದಿನ ವರ್ಷದ ಕಡತಗಳೂ ಸೇರಿವೆ ಎಂದರು.
ಸಮವಸ್ತ್ರ ಹಾಗೂ ಪುಸ್ತಕಗಳನ್ನು ಬರುವ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ವಿತರಿಸುವಂತೆ ಕ್ರಮ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಸೈಕಲ್ ವಿತರಣೆಯನ್ನೂ ಮುಂದಿನ ವರ್ಷದ ಆರಂಭದಲ್ಲಿಯೇ ಮಾಡಲಾಗುವುದು ಎಂದರು.
ಅಡಕೆ ನಿಷೇಧಿಸುವುದು ಸಾಧ್ಯವೇ ಇಲ್ಲ. ಸುಪ್ರೀಂಕೋರ್ಟ್‌ನಲ್ಲಿ ಈ ವಿಷಯವನ್ನು ಕೇಂದ್ರ ಸರ್ಕಾರವು ಸಮರ್ಥವಾಗಿ ನಿರ್ವಹಿಸಲಿದೆ.
ಅದಕ್ಕೂ ಮುಂಚೆ ಇದು ಒಂದೆರಡು ಚುನಾವಣೆಗಳ ವಿಷಯವಾಗುವುದು ಅನಿವಾರ್ಯ ಎಂದು ಮಾರ್ಮಿಕವಾಗಿ ನುಡಿದರು.
ಕ್ರಿಯಾಯೋಜನೆ: ನಗರೋತ್ಥಾನ ಯೋಜನೆ ಅನುದಾನ ಕ್ರಿಯಾಯೋಜನೆ ಸಿದ್ಧಪಡಿಸುವ ಮುನ್ನ ತಮ್ಮನ್ನು ಆಹ್ವಾನಿಸಿಲ್ಲ. ಇದನ್ನು ವಾಪಸ್ ಪಡೆಯಬೇಕು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಆಕ್ಷೇಪಿಸಿರುವ ಬಗ್ಗೆ ಪ್ರಶ್ನಿಸಿದಾಗ, ಅವರನ್ನು ಅಹ್ವಾನಿಸಿಲ್ಲ ಎಂದರೆ ಅದು ಸರಿ ಅಲ್ಲ. ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಲಾಗಿದೆ.
ಈ ಸಂದರ್ಭದಲ್ಲಿ ವಾಪಸ್ ಪಡೆಯುವುದು ಈ ಕ್ಷೇತ್ರಕ್ಕೆ ನಷ್ಟವಾಗಲಿದೆ. ಬಜೆಟ್‌ಗೆ ಮುನ್ನ ಅನುಮೋದನೆ ಪಡೆಯುವುದು ಮುಖ್ಯ. ನಂತರ ಚರ್ಚಿಸಿ ಯಾವ ರೀತಿ ಪರಿಷ್ಕರಣೆಯನ್ನೂ ಮಾಡಬಹುದು ಎಂದರು.