ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ನೇರವಾಗಿ ಯುದ್ಧ ಮಾಡದ ಕಾಂಗ್ರೆಸ್‌'

Lingaraj Badiger
Updated On : 13 Jan 2014, 10:44 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 12
ಚುನಾವಣೆಯಲ್ಲಿ ಕಾಂಗ್ರೆಸ್‌ನವರು ನೇರವಾಗಿ ಯುದ್ಧ ಮಾಡಲು ಸಿದ್ಧರಿಲ್ಲ. ಅಮ್ ಆದ್ಮಿ ಪಾರ್ಟಿ ಮೂಲಕ ನಮಗೆ ತೊಡರುಗಾಲಾಗುತ್ತಲೇ ಇದ್ದಾರೆ. ಎಎಪಿಯತ್ತ ಮನಸ್ಸು ಹರಿಸುವ ಪ್ರತಿ ಮತವೂ ಬಿಜೆಪಿಯದ್ದು ಎಂಬ ಗಂಭೀರ ಚಿಂತನೆ ಕಾರ್ಯಕರ್ತರಲ್ಲಿ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿದ್ದರಾಮಣ್ಣ ಹೇಳಿದರು.
ಜಿಲ್ಲಾ ಬಿಜೆಪಿಯು ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಮತಗಟ್ಟೆ ನೋಂದಣಿ, ಬೂತ್ ಮಟ್ಟದ ಏಜೆಂಟ್, ನೋಂದಣಿ ಪ್ರಮುಖರು ಮತ್ತು ಪ್ರಭಾರಿಗಳಿಗೆ ಕಾರ್ಯಾಗಾರ ಉದ್ಘಾಟನೆ ನಂತರ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುವ ವೇಳೆ ಕಾರ್ಯಕರ್ತರು, ಆ ಮನೆಯ ಯೋಚನೆಯನ್ನು ಗಂಭೀರವಾಗಿ ಗಮನಿಸಬೇಕು.
ಆ ಮನೆಯ ಚಿಂತನೆ ಬದಲಾಗಿದ್ದರೆ, ಬಿಜೆಪಿಗೆ ಮತ ಬೀಳುವಂತೆ ಪರಿವರ್ತಿಸಬೇಕು ಎಂದರು.
ಯೋಗ್ಯ ನಾಯಕತ್ವ: ದೇಶವು ಇಂದು ಆಂತರಿಕ ಹಾಗೂ ಬಾಹ್ಯ ಶಕ್ತಿಗಳಿಂದ ಆತಂಕ ಎದುರಿಸುತ್ತಿದೆ. ದೇಶದ ಜನತೆ ಅಭದ್ರತೆಯಿಂದ ಬಳಲುತ್ತಿದ್ದಾರೆ. ಹಾಗೆಯೇ ದೇಶದ ನಾಯಕತ್ವ ಬದಲಾವಣೆ ಬಯಸುತ್ತಿದ್ದಾರೆ ಎಂದ ಅವರು, ನಮ್ಮಲ್ಲಿ ಯೋಗ್ಯ ನಾಯಕತ್ವ ಇದೆ. ನರೇಂದ್ರ ಮೋದಿ ನಮ್ಮ ಪಕ್ಷದ ಅಭ್ಯರ್ಥಿ. ಅವರ ಮೇಲೆ ವಿಶ್ವಾಸವಿಟ್ಟು ದೇಶಾದ್ಯಂತ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದರು.
ದೇಶ ಎದುರಿಸುತ್ತಿರುವ ಬಾಹ್ಯ ಭದ್ರತೆ ಸಮಸ್ಯೆಯಷ್ಟೇ ಆಂತರಿಕ ಭದ್ರತಾ ಸಮಸ್ಯೆಯಿಂದಲೂ ಬಳಲುತ್ತಿದೆ. ನಮ್ಮ ಮಧ್ಯೆಯೇ ಏನು ಬೇಕಾದರೂ ಸಂಭವಿಸಿದರೂ ಆಶ್ಚರ್ಯವೇನಿಲ್ಲ ಎಂದ ಅವರು, ಯಾಸೀನ್ ಘಟ್ಕಳ್‌ಗೆ ಮಲೆನಾಡಿನ ಸಂಬಂಧವಿದೆ, ಅವರ ಚಟುವಟಿಕೆ ವಿಸ್ತಾರಗೊಂಡಿರುವುದು ಆತಂಕ ಹುಟ್ಟಿಸುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿ ಆಗುತ್ತಿಲ್ಲ: ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳ ನಡುವೆ ಐದು ರುಪಾಯಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದ ವೇಳೆ ಮಂಜೂರಾಗಿದ್ದ ಯೋಜನೆಗಳಿಗಷ್ಟೇ ಶಂಕುಸ್ಥಾಪನೆ, ಉದ್ಘಾಟನೆ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯುಂಟಾಗಿದೆ. ಎಲ್ಲಿ ನಾವು ಕಳೆದುಕೊಂಡಿದ್ದೆವೆಯೋ ಅಲ್ಲಿಯೇ ಪುನಃ ಮುನ್ನಡೆ ಸಾಧಿಸಬೇಕು. ಈ ಹಿನ್ನೆಲೆಯಲ್ಲಿ ಬೂತ್ ಕಾರ್ಯಕರ್ತರ ಪರಿಶ್ರಮ ಮುಖ್ಯವಾಗುತ್ತದೆ. ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆ ತಲುಪಿ ಮತದಾರನ ಮನವೊಲಿಸಿದರೆ ಮೋದಿ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಗಿರೀಶ್ ಪಟೇಲ್, ಜ್ಞಾನೇಶ್ವರ್, ಜಿಲ್ಲಾ ಕಾರ್ಯದರ್ಶಿ ಚನ್ನಬಸಪ್ಪ, ಸುಭಾಶ್, ಸುವರ್ಣ ಶಂಕರ್, ಮೋಹನ್‌ರೆಡ್ಡಿ, ನಂಜುಂಡಸ್ವಾಮಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement