ಪಕ್ಷದ ಸಾಧನೆ ಜನಸಾಮಾನ್ಯರಿಗೆ ವಿವರಿಸಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 12
ಉತ್ತಮ ಆಡಳಿತ ನೀಡಿದ್ದರೂ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ನಮ್ಮ ಕಾರ್ಯಕರ್ತರು ಸೂಕ್ತ ಉತ್ತರ ನೀಡಬೇಕು. ಜನಸಾಮಾನ್ಯರಿಗೆ ಪಕ್ಷದ ಸಾಧನೆ ಮನಮುಟ್ಟುವಂತೆ ವಿವರಿಸಬೇಕು. ನಿರಂತರವಾಗಿ ಜನಸಂಪರ್ಕ ಇಟ್ಟುಕೊಳ್ಳಬೇಕೆಂದು ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನೇಕ ಜನಪರ ಯೋಜನೆ ಜಾರಿಗೆ ತಂದಿದ್ದರೂ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಅಪಪ್ರಚಾರವೆಂದ ಅಲೆಯ ವಿರುದ್ಧ ಕಾರ್ಯಕರ್ತರು ಈಜಬೇಕಾಗಿದೆ ಎಂದು ಹೇಳಿದರು.
ನಾನು ಬದುಕಿದ್ದೇನೆ ಸಾರ್...
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಆಸ್ಕರ್ ಮಾತನಾಡುವ ವೇಳೆ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಜಿ.ಡಿ. ನಾರಾಯಣಪ್ಪ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಪಿ. ದಿನೇಶ್ ಅವರ ಹೆಸರನ್ನು ಸಂಬೋಧಿಸಿರಲಿಲ್ಲ. ಹೀಗಾಗಿ ಪಕ್ಷದ ಮುಖಂಡರೊಬ್ಬರು ಈ ಮೂವರ ಹೆಸರು ಬರೆದಿದ್ದ ಚೀಟಿಯನ್ನು ಆಸ್ಕರ್ ಕೈಗೆ ಕೊಟ್ಟರು.
ಭಾಷಣ ಮುಗಿಸುವ ವೇಳೆ ಈ ಮೂವರ ಹೆಸರು ಹೇಳಿದ ಸಚಿವರು, ಇವರನ್ನು ಸ್ಮರಿಸುವುದಾಗಿ ಹೇಳಿದರು. ತಕ್ಷಣವೇ ವೇದಿಕೆ ಮುಂಭಾಗ ಆಸೀನರಾಗಿದ್ದ ಮಾಜಿ ಶಾಸಕ ಎಚ್ಎಂಸಿ, ಸರ್, ನಾನಿನ್ನೂ ಬದುಕಿದ್ದೇನೆ ಎಂದು ಹೇಳಿದಾಗ ಸಭೆಯಲ್ಲಿ ಗುಲ್ಲೋ ಗುಲ್ಲು, ಸಚಿವರು ಕೂಡ ಗಲಿಬಿಲಿಗೊಂಡರು. ಹಾಗೆಯೇ ಸಾವರಿಸಿಕೊಂಡ ಕೇಂದ್ರ ಸಚಿವ ಆಸ್ಕರ್, ಹೀಗೆ ಸ್ಮರಿಸಿದ್ದರಿಂದಾಗಿ ನಿಮ್ಮ ಆಯಸ್ಸು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸಮಜಾಯಿಷಿಯನ್ನೂ ನೀಡಿದ ಪ್ರಸಂಗ ನಡೆಯಿತು.