ಸಂಪಾದನೆಯೇ ಶಿಕ್ಷಣದ ಉದ್ದೇಶವಾಗದಿರಲಿ: ಕಾರ್ಣಿಕ್
ಜೋಗ್‌ಫಾಲ್ಸ್: ಇಂದು ಶಿಕ್ಷಣ ವ್ಯಾಪಾರಿಕರಣಗೊಳ್ಳುತ್ತಿದೆ. ಹೆಚ್ಚು ಸಂಪಾದನೆಯೇ ಶಿಕ್ಷಣದ ಉದ್ದೇಶವಾಗಿದೆ. ಶಾಲೆಗಳಲ್ಲಿ ಅಂಕಗಳಿಕೆಗೆ ಪ್ರಾಧಾನ್ಯತೆ ನೀಡುತ್ತಿರುವುದನ್ನು ಇಂದು ಎಲ್ಲೆಡೆ ಕಾಣುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ವಿಷಾದ ವ್ಯಕ್ತಪಡಿಸಿದರು.
ಶರಾವತಿ ವಿದ್ಯಾಕೇಂದ್ರದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇದಕ್ಕೆ ಹೊರತಾಗಿ ಸೇವಾ ಭಾವನೆಯನ್ನು ತನ್ನ ಧೇಯೋದ್ದೇಶವಾಗಿಟ್ಟುಕೊಂಡು ಶರಾವತಿ ವಿದ್ಯಾಕೇಂದ್ರವು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಗುರು-ಹಿರಿಯರಲ್ಲಿ ಭಕ್ತಿಯನ್ನು ಬೆಳಸುತ್ತಾ ತನ್ನ ಸುಧೀರ್ಘ 25 ನೇ ವರ್ಷದೊಂದಿಗೆ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಮಕ್ಕಳಿಗೆ ಶಿಸ್ತು ಕಲಿಸಿ: ನಿವೃತ್ತ ಪ್ರಾಂಶುಪಾಲ ಅ.ಪು. ನಾರಾಯಣಪ್ಪ, ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಏಕತೆ, ವೈವಿದ್ಯತೆ, ಸನ್ನಡತೆ, ಶಿಸ್ತು, ಸಹಬಾಳ್ವೆಯಂತಹ ಗುಣಗಳನ್ನು ಬೆಳೆಸಬೇಕಾದದು ನಮ್ಮ ಕರ್ತವ್ಯ. ಜೊತೆಗೆ ಪೋಷಕರು ತಮ್ಮ ಕೆಲಸಮಯವನ್ನು ಮಕ್ಕಳಿಗೆ ಮೀಸಲಿಟ್ಟಾಗ ಮಾತ್ರ ಆರೋಗ್ಯಕರ ವಾತಾವರಣ ಸೃಷ್ಟಿಯಾಗಬಲ್ಲದು ಎಂದರು.
ಅಧ್ಯಕ್ಷತೆಯನ್ನು ಸಮಾಜ ಸೇವಕ ಎಸ್.ಎಂ. ಪೈ, ವಿದ್ಯಾಕೇಂದ್ರದ ಸಂಸ್ಥಾಪಕ ಮೋಹನ್ ಪಡಿಯಾರ್ ವಹಿಸಿದ್ದರು. ಕಾರ್ಯನಿರ್ವಾಹಕ ಅಭಿಯಂತರ ಜೆ.ಕೆ. ಚಂದ್ರಶೇಖರ್ ಉಪಸ್ಥಿತರಿದ್ದರು.
ಸಂಗೀತ ಸಂಜೆ: ಪ್ರಜ್ಞಾ ಭಟ್ ಮತ್ತು ರಚಿತಾ ಪ್ರಾರ್ಥಿಸಿ, ಬಬಿತಾ ಪ್ರೇಮ್ ಕುಮಾರ್ ಸ್ವಾಗತಿಸಿ, ಪ್ರಸ್ತಾವಿಕ ಭಾಷಣವನ್ನು ಬಿ.ಎಸ್. ಯಶೋಧರ ಇಂದ್ರ ಮಾಡಿದರು. ವಂದನಾರ್ಪಣೆಯನ್ನು ಹೆಚ್.ಎಸ್.ಸಾದಿಕ್ ಮಾಡಿದರು. ಗಾಯಕ ನರಹರಿ ದೀಕ್ಷಿತ್ ಮತ್ತು ತಂಡದವರಿಂದ ಸಂಗೀತ ಸಂಜೆ, ನೃತ್ಯ, ಹಾಸ್ಯ ಜನತೆಯನ್ನು ರಂಜಿಸಿತು.