ಪೊಲೀಸರ ಬಗ್ಗೆ ಪೋಷಕರಲ್ಲಿ ಗೊಂದಲ: ರಾಜು
ಕ.ಪ್ರ. ವಾರ್ತೆ, ಸೊರಬ, ಜ.13
ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ಇರುವ ಪೊಲೀಸ್ ಇಲಾಖೆ ಬಗ್ಗೆ ಪೋಷಕರಲ್ಲಿ ಗೊಂದಲಗಳಿವೆ ಎಂದು ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಟಿ. ರಾಜು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಂತ ತಪ್ಪು ಕಲ್ಪನೆಯಿಂದ ಹೊರ ಬಂದು ಸಮಾಜದಲ್ಲಿ ಪೊಲೀಸ್ ಇಲಾಖೆಯಲ್ಲಿರುವ ಸುಧಾರಿಸಬಹುದಾದ ಉದ್ಯೋಗಾವಕಾಶಗಳನ್ನು ಪಡೆಯುವುದರ ಮೂಲಕ ಇಲಾಖೆ ಬಗ್ಗೆ ಗೌರವ ಹೊಂದಬೇಕು, ಪೊಲೀಸ್ ಇಲಾಖೆಯಲ್ಲಿ ಗ್ರೇಡ್ ಹುದ್ದೆಗಳಿದ್ದು, ಅವುಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಹಂತದಲ್ಲಿಯೇ ಆ ಗುರಿ ಮುಟ್ಟುವ ಸಾಧನೆಯೆಡೆಗೆ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆ ಬೇರೆ ವಿಷಯದಲ್ಲಿ ಜ್ಞಾನ ಪಡೆಯುವುದರ ಜೊತೆಗೆ ಕಾನೂನಿನ ತಿಳುವಳಿಕೆಯನ್ನು ಪಡೆಯುವುದು ಕೂಡ ಅನಿವಾರ್ಯವಾಗಿದೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಡಿ. ನಾಗರಾಜು ಮಾತನಾಡಿ, ಈಗಿನ ಯುವ ಜನತೆಗೆ ವೃತ್ತ ಪತ್ರಿಕೆ ಹಾಗೂ ಖಾಸಗಿ ಸುದ್ದಿವಾಹಿನಿಗಳಲ್ಲಿ ಬರುವ ಅಪರಾಧ ಸುದ್ಧಿಗಳು ಹೆಚ್ಚು ರುಚಿಸುತ್ತಿವೆಯೇ ಹೊರತು ಆರೋಗ್ಯಪೂರ್ಣ ಸುದ್ಧಿಗಳನ್ನು ಆಸ್ವಾದಿಸುವುದರ ಕಡೆಗೆ ಗಮನ ಹರಿಸದಿರುವುದು ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ. ಸಮಾಜದಲ್ಲಿ ನಡೆಯುವ ವಿಕೃತ ಕೃತ್ಯಗಳಿಗೆ ವಿದ್ಯಾರ್ಥಿಗಳು ಗಮನ ನೀಡದೇ ಉತ್ತಮ ವಿಷಯಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಶ್ಯಾಮ್ ಸುಂದರ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ರವೀಂದ್ರಭಟ್ ಕುಳಿಬೀಡು, ಗಂಗಾಧರ, ಗೀತಾ, ಸುಬ್ರಹ್ಮಣ್ಯ, ಬಸವರಾಜಪ್ಪ, ಶಿವಕುಮಾರ್, ಅಶ್ವತ್ಥನಾರಾಯಣ, ಮೊಹಮ್ಮದ್ ಅಲಿ ಹಾಗೂ ವಿದ್ಯಾರ್ಥಿಗಳು ಇದ್ದರು.