ಬಲಿಷ್ಠ ಭಾರತಕ್ಕಾಗಿ ಸ್ವಯಂ ಸೇವಕ ಆಂದೋಲನ
ಕ.ಪ್ರ. ವಾರ್ತೆ, ಶಿವಮೊಗ್ಗ, ಜ.13
ವಿವಿಧ ಉದ್ದೇಶಗಳನ್ನಿಟ್ಟುಕೊಂಡ ಉತ್ತಮ ಭಾರತಕ್ಕಾಗಿ ಸ್ವಯಂ ಸೇವಕ ಆಂದೋಲನವು ಸ್ಥಳೀಯ ಸಂಸ್ಥೆ ಶ್ರೀಗಂಧದೊಂದಿಗೆ ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲನದ ಮುಖ್ಯಸ್ಥ ರವೀಂದ್ರ ಪ್ರಸಾದ್ ಹಾಗೂ ಶ್ರೀಗಂಧ ಸಂಸ್ಥೆ ಗೌರವ ಕಾರ್ಯದರ್ಶಿ ಬಿ.ಆರ್. ಮಧುಸೂಧನ್ ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು.
ದೇಶಕ್ಕಾಗಿ ಒಂದು ಗಂಟೆ ಎಂಬ ಕಲ್ಪನೆಯಡಿ ಶ್ರೀ ರವಿಶಂಕರ್ ಗುರೂಜಿಯವರ ಮಾರ್ಗದರ್ಶನದಲ್ಲಿ ಉತ್ತಮ ಭಾರತಕ್ಕಾಗಿ ಸ್ವಯಂ ಸೇವಕ ಎಂಬ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಜನಸಾಮಾನ್ಯರನ್ನು ಚಟುವಟಿಕೆಗೊಳಿಸುವ ಯೋಜನೆ ಇದಾಗಿದ್ದು, ಹಿರಿಯ-ಕಿರಿಯ, ಶ್ರೀಮಂತ-ಬಡವ, ಪಟ್ಟಣ-ಹಳ್ಳಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು, ಸಮಾಜ ಸೇವಾಕರ್ತರು, ಕಲೆ ಸಂಸ್ಕೃತಿ ಸಂಗೀತ ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವವರನ್ನು ಈ ಆಂದೋಲನದಲ್ಲಿ ಪಾಲ್ಗೊಳ್ಳುಲು ಆಹ್ವಾನಿಸುತ್ತಿದ್ದೇವೆಂದು ಎಂದರು.
ಸ್ವಚ್ಛ ಆಡಳಿತ: ನಿರ್ಗತಿಕ ಮಕ್ಕಳಿಗೆ ಶಿಕ್ಷಣ, ವ್ಯಸನ ಮುಕ್ತ ಸಮಾಜ, ಹೆಣ್ಣು ಮಕ್ಕಳ ಹಾಗೂ ಸ್ತ್ರೀಯರ ರಕ್ಷಣೆ, ಹಿರಿಯ ನಾಗರಕಿರ ಪೋಷಣೆ, ಸ್ವಚ್ಛ ಆಡಳಿತ (ಭ್ರಷ್ಟಾಚಾರದ ವಿರುದ್ಧ ದನಿ), ಪರಿಸರದ ಬಗ್ಗೆ ಕಾಳಜಿ, ಮತದಾನದ ಹಕ್ಕು ಕುರಿತು ಜಾಗೃತಿ ಹೀಗೆ ಹಲವು ಚಟುವಟಿಕೆಗಳನ್ನು ಮಾಡುವ ಮೂಲಕ ನಾವು ನಮ್ಮ ಆರೋಗ್ಯ, ಸಮಾಜ ಹಾಗೂ ದೇಶದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಕೈಜೋಡಿಸುವ ಕಾರ್ಯ ಎಂದರು.
ಶೇ.90ಕ್ಕಿಂತ ಅಧಿಕ ಮತದಾನ: ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ಚುನಾವಣೆ ವೇಳೆ ಮತದಾನ ಜಾಗೃತಿ ವಿಷಯದಲ್ಲಿ ಮಾಡಿದ ಕೆಲಸ ಫಲಕೊಟ್ಟಿದೆ. ಅನೇಕ ಕಡೆ ಶೇ.90ಕ್ಕಿಂತ ಹೆಚ್ಚು ಮತದಾನವಾಗಿದೆ ಎಂದು ಮಾಹಿತಿ ನೀಡಿದ ಅವರು, ಇಲ್ಲೂ ಸಹ ಮತದಾನ ಜಾಗೃತಿಗಾಗಿ ಕೆಲಸ ಮಾಡಲಾಗುತ್ತದೆ ಎಂದರು.
ಶ್ರೀ ರವಿಶಂಕರ ಗುರೂಜಿಯವರು ಕೆಲವು ತಿಂಗಳಲ್ಲಿ ಶಿವಮೊಗ್ಗ ನಗರಕ್ಕೆ ಬರುತ್ತಿದ್ದಾರೆ. ಅವರ ಆಗಮನದ ಮುಹೂರ್ತವನ್ನು ಐತಿಹಾಸಿಕವಾಗಿಸಬೇಕೆನ್ನುವ ಗುರಿ ಇದೆ. ಸಕ್ರಿಯ, ಸೃಜನಶೀಲತೆಯ ಗುರುಕಾಣಿಕೆ ಅರ್ಪಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್ನ ಶಬರೀಶ್ ಕಣ್ಣನ್, ಶ್ರೀಗಂಧ ಸಂಸ್ಥೆಯ ಶಂಕರ್, ಶ್ರೀರಂಜಿನಿ ದತ್ತಾತ್ರಿ, ಚಂದ್ರಹಾಸ, ಶಿವಶಂಕರ್, ಗೋವಿಂದರಾಜು ಇದ್ದರು.