ಯುವ ಸಮೂಹ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಬೇಕಿದೆ; ನಾಗೇಶ್
ಶಿವಮೊಗ್ಗ: ನವ ಚೈತನ್ಯ ಕರ್ನಾಟಕ ಸೇನೆಯು ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.
ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಸೇನೆಯ ಅಧ್ಯಕ್ಷ ಕೆ.ಎಂ. ನಾಗೇಶ್ ಮಾತನಾಡಿ, ರಾಷ್ಟ್ರೀಯ ಯುವ ದಿನವು ಕೇವಲ ತೋರಿಕೆಗೆ ಆಚರಿಸದೆ ಯುವ ಸಮೂಹವನ್ನು ಕಾಡುತ್ತಿರುವ ಭಯೋತ್ಪಾದನೆ, ನಿರುದ್ಯೋಗ, ಮಾದಕ ವ್ಯಸನ, ಬಡತನಗಳಂತಹ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಯುತ ಹೋರಾಟವನ್ನು ಹಮ್ಮಿಕೊಳ್ಳಬೇಕು. ರಾಷ್ಟ್ರಪ್ರೇಮವುಳ್ಳ ಯುವ ನೇತಾರರನ್ನು ಸೃಷ್ಟಿಸಿ ಪ್ರಜಾಸತ್ತೆಯ ಉಳುವಿಗಾಗಿ ಯುವ ಸಮೂಹ ಶ್ರಮಿಸಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಘಟನೆಯ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಎಚ್.ಕೆ. ವಿಜಯಮೆನನ್ ಸ್ವಾಮಿ, ವಿವೇಕಾನಂದ ಯಾವುದೇ ಒಂದು ಜಾತಿ, ಧರ್ಮ, ದೇಶಕ್ಕೆ ಸೀಮಿತವಾದವರಲ್ಲ. ವಿಶ್ವ ಮಾನವತ್ವದ ಹೊಸ ಸಂದೇಶವನ್ನು ಚಿಕಾಗೋ ಸಮ್ಮೇಳನದಲ್ಲಿಯೇ ಸಾರಿದ ಮಹಾನ್ ನಾಯಕ ಎಂದು ಹೇಳಿದರು.
ಎಚ್.ಎಂ. ಖಾದ್ರಿ ಮಾತನಾಡಿ, ದೇಶದ ಒಟ್ಟ ಜನಸಂಖ್ಯೆಯ ಅರ್ಧದಷ್ಟಿರುವ ಯುವ ಸಮೂಹವು ವಿವೇಕಾನಂದರ ಆದರ್ಶವನ್ನು ಅಳವಡಿಸಿಕೊಳ್ಳಬೇಕು. ಒಳ್ಳೆಯ ಶಿಕ್ಷಣದ ಮೂಲಕ ಮಾನವತ್ವವನ್ನು ಅರಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಿರಿಜಾ ಆರ್. ಕುಮಾರ್, ನಜ್ಮಾ, ದಾದಾಪಿರ್, ಧರ್ಮರಾಜು, ಮಂಜಪ್ಪ ಕೆ.ಜಿ. ಚಂದ್ರನ್ ಉಪಸ್ಥಿತರಿದ್ದರು. ರಕ್ಷಿತ್ ಸ್ವಾಗತಿಸಿದರು, ಶ್ರೀನಿವಾಸ್ ಗೌಂಡರ್ ವಂದಿಸಿದರು.