ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಚನಕಾರರ ತತ್ವ ಅಳವಡಿಸಿಕೊಂಡರೆ ಜೀವನ ಸಾರ್ಥಕ: ಸಚಿವ ಕಿಮ್ಮನೆ

Rashmi Kasaragodu
Updated On : 14 Jan 2014, 11:22 am

ಕ.ಪ್ರ. ವಾರ್ತೆ, ಶಿವಮೊಗ್ಗ, ಜ.13
ಅದೊಂದು ಅರ್ಥಪೂರ್ಣ ಕಾರ್ಯಕ್ರಮ. ಭೋವಿ ಸಮಾಜ, ಅದರಲ್ಲೂ ಕಲ್ಲು- ಮಣ್ಣು ಕೆಲಸ ಮಾಡುವ ವಡ್ಡರ ಕುರಿತಾಗಿ ಒಂದಿಷ್ಟು ಚಿಂತನೆ- ಚರ್ಚೆಗಳು ನಡೆದವು. ಅವರ ಸಂಕಷ್ಟಗಳ ಕುರಿತು ಜನಪ್ರತಿನಿಧಿಗಳು- ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವಾಯಿತು. ಆದರೆ, ಈ ಸರ್ಕಾರಿ ಕಾರ್ಯಕ್ರಮದಿಂದ ಜನರು ಮಾತ್ರ ದೂರ ಉಳಿದಿದ್ದರು. ಈ ಸಮಾಜಕ್ಕೆ ಸೇರಿದವರು ಬೆರಳೆಣಿಕೆ ಮಂದಿ ಪಾಲ್ಗೊಂಡಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಇದೇ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿತ್ತು. ಸಿದ್ಧರಾಮೇಶ್ವರ ಕುರಿತು ಒಂದಷ್ಟು ಚಿಂತನೆಗಳ ಬಗ್ಗೆ ಗಮನ ಹರಿಸುವುದು, ಅವರ ತತ್ವಾದರ್ಶಗಳ ಬಗ್ಗೆ ಮೆಲುಕು ಹಾಕುವುದು ಕಾರ್ಯಕ್ರಮದ ಉದ್ದೇಶ. ಆದರೆ, ಸಾರ್ವಜನಿಕ ವಲಯದಿಂದ ಕಾರ್ಯಕ್ರಮಕ್ಕೆ ಸೂಕ್ತ ಪ್ರಮಾಣದಲ್ಲಿ ಸ್ಪಂದನೆಯೇ ಸಿಗಲಿಲ್ಲ.
ಇಷ್ಟರ ಮಧ್ಯೆಯೂ ಸಿದ್ಧರಾಮೇಶ್ವರರ ಸಮಾಜವಾದ ವಡ್ಡರ-ಭೋವಿ ಜನಾಂಗ ಎದುರಿಸುತ್ತಿರುವ ಆತಂಕಕಗಳ ಕುರಿತು ಒಂದಷ್ಟು ಮಾಹಿತಿ ಅಲ್ಲಿ ಪ್ರಸ್ತುತಗೊಂಡು ಜನ ಪ್ರತಿನಿಧಿಗಳ ಗಮನ ಸೆಳೆದಿದ್ದು ಮಾತ್ರ ವಿಶೇಷ.
ಸಾರ್ಥಕತೆ ಪಡೆಯೋಣ: ವಚನಕಾರರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾಗರಿಕ ಸಮಾಜ ಸಾರ್ಥಕತೆಯನ್ನು ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕರೆ ನೀಡಿದರು.
ಬಸವಣ್ಣನವರ ಆದಿಯಾಗಿ 12ನೇ ಶತಮಾನದ ಎಲ್ಲ ವಚನಕಾರರು ಕಾಯಕ, ಸತ್ಯ ನಿಷ್ಟೆ ಪ್ರಾಮಾಣಿಕವಾಗಿ ಬದುಕನ್ನು ರೂಢಿಸಿಕೊಂಡು ಅದರ ಸಾರವನ್ನು ಜಗತ್ತಿಗೆ ಸಾರಿದ್ದಾರೆ. ಇಂತಹ ಶರಣರ ವಚನಕಾರರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜನಸಮಾನ್ಯರು ಬದುಕಿನ ಆನಂದವನ್ನು ಸವಿಯಬೇಕು ಎಂದರು.
ವೈಚಾರಿಕ ಬದುಕಿನ ಬಗ್ಗೆ ಸಂದೇಶ ಸಾರಿದ ಅನೇಕ ವಚನಕಾರರನ್ನು ಸ್ಮರಿಸಿಕೊಳ್ಳುವ ಹಾಗೂ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಉದ್ದೇಶದಿಂದ ಶಿವಯೋಗಿ ಸಿದ್ದರಾಮೇಶ್ವರರಂತಹ ಜಯಂತಿಯಿಂದ ಸರ್ಕಾರವೇ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಚನಕಾರರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಪಾಲಿಸಿದರೆ ಸಾರ್ಥಕವಾಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಶಿವಯೋಗಿ ಸಿದ್ಧರಾಮೇಶ್ವರರ ಸಮುದಾಯಕ್ಕೆ ಸೇರಿದ ಭೋವಿ ಸಮಾಜದ ಬಾಂಧವರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ರಾಜಕೀಯವಾಗಿ ಮಂಚೂಣಿಗೆ ಬರಬೇಕು ಎಂದರು.
ಭೋವಿ ವಿದ್ಯಾವರ್ಧಕ ಸಂಘದ ನಿರ್ದೇಶಕ ಟಿ. ಕೃಷ್ಣಪ್ಪ ಶಿವಯೋಗಿ ಸಿದ್ಧರಾಮೇಶ್ವರ ಕುರಿತಾಗಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಭೋವಿ ಸಮಾಜದ ಸಂಕಷ್ಟಗಳನ್ನು ಸಭೆಗೆ ವಿವರಿಸಿದರು.
ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ಎಚ್. ಹನುಮಂತಪ್ಪ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್, ಮುಖಂಡರಾದ ರವಿಕುಮಾರ್, ಧೀರರಾಜ್ ಹೊನ್ನವಿಲೆ, ವೀರಭದ್ರಪ್ಪ ಪೂಜಾರ್, ಪಕೀರಪ್ಪ, ಅಪರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಸೂಡ ಆಯುಕ್ತ ಜನಾರ್ದನ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೆ ಮುನ್ನ ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಸ್ವಾಗತಿಸಿ, ತಹಸೀಲ್ದಾರ್ ಕೊಟ್ರೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement