ಅಕ್ರಮ ಕಲ್ಲುಕ್ವಾರಿ ಗಣಿಗಾರಿಕೆ ತನಿಖೆಗೆ ಒತ್ತಾಯ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಜ.14
ನಗರದ ಕೋಟೆಗಂಗೂರು, ಗೆಜ್ಜೇನಹಳ್ಳಿ, ಕಲ್ಲುಗಂಗೂರು ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲುಕ್ವಾರಿ ಗಣಿಗಾರಿಕೆಯನ್ನು ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥ ಎಷ್ಟೇ ಪ್ರಭಾವಿಯಾದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡುವ ಜೊತೆಗೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕೆಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಹಾಗೂ ಅಲ್ಲಿ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಮ್ಮ ಗಮನಕ್ಕೆ ಬಂದಿದ್ದು, ಈ ವಿಚಾರ ತಮಗೂ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೂ, ಜಿಲ್ಲಾಡಳಿತಕ್ಕೂ ಅವಮಾನದ ವಿಷಯ. ಕಪ್ಪು ಚುಕ್ಕೆಯಂತೆ ಎಂದು ಅಭಿಪ್ರಾಯಪಟ್ಟರು.
ಅಕ್ರಮ ಕ್ವಾರಿ ನಡೆಸುತ್ತಿರುವ ವ್ಯಕ್ತಿ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರಕ್ಷಣಾ ಇಲಾಖೆಯನ್ನು ಮೀರಿದ ವ್ಯಕ್ತಿಯೇ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಇದು ನಿಲ್ಲುವವರೆಗೆ ವಿಶ್ರಮಿಸುವುದಿಲ್ಲ ಎಂದು ಹೇಳಿದರು.
ಎಂತಹ ಪ್ರಭಾವಿಗಳು...: ಗೆಜ್ಜೇನಹಳ್ಳಿ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯನ್ನು ಕೇಳಿದರೆ, ನಾವು ಪದೇ ಪದೇ ರೈಡ್ ಮಾಡಿದರೂ ಮತ್ತೆ ಮತ್ತೆ ಕ್ವಾರಿ ನಡೆಸುತ್ತಿದ್ದಾರೆ ಎಂದು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿಯವರೂ ಸಹ ಸುಮ್ಮನಿದ್ದಾರೆ. ಹಾಗಾದರೆ ಈ ಕಲ್ಲುಗಣಿಗಾರಿಕೆಯ ಹಿಂದೆ ಅಂದೆತಹ ಪ್ರಭಾವಿ ಕೈಗಳಿರಬಹುದೆಂದು ಪ್ರಶ್ನಿಸಿದರು.
ಇಲ್ಲಿ ಕಲ್ಲುಗಣಿಗಾರಿಕೆ ಕಾರ್ಮಿಕರ ಹಿತ ಕಾಯಬೇಕಾದದ್ದು, ಕೇಂದ್ರ ಕಾರ್ಮಿಕ ಇಲಾಖೆ. ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಕಲ್ಲುಗಣಿಗಾರಿಕೆ ಕಾರ್ಮಿಕರಿಗೆ ಕನಿಷ್ಠವೇತನ ಹಾಗೂ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಆದರೆ, ಇಲ್ಲಿ ಅದು ಜಾರಿಯಲ್ಲಿಲ್ಲ. ಹೀಗಾಗಿ ಚಿತ್ರದುರ್ಗದಲ್ಲಿರುವ ಕಾರ್ಮಿಕ ಕಾಯ್ದೆ ಅನುಷ್ಠಾನಧಿಕಾರಿಗೆ ಮಾಹಿತಿ ನೀಡಲಾಗಿದೆ. ಜಿಲ್ಲಾಡಳಿತ ಸಹ ಕೂಡಲೇ ಈ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳುವ ಜೊತೆಗೆ ಜಿಲ್ಲೆಯ ಇತರೆ ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆಯೂ ತನಿಖೆ ಕೈಗೊಳ್ಳಬೇಕೆಂದರು.
ಕಾನೂನು ಸುವ್ಯವಸ್ಥೆ ಇದೆಯೇ? ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಲ್ಲದೇ, ಕಾರ್ಮಿಕರನ್ನು ಶೋಷಣೆಗೊಳಪಡಿಸಲಾಗುತ್ತಿದೆ. ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಅನುಮಾನ ಬರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಎಂ.ಶಂಕರ್, ಬಿಜೆಪಿ ಯುವ ಮೋರ್ಚಾ ಪ್ರಭಾರಿ ಡಿ.ಎಸ್. ಅರುಣ, ಬಿ.ಆರ್. ಮಧುಸೂಧನ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭವಾನಿರಾವ್ ಮೋರೆ, ಹಿರಣ್ಣಯ್ಯ ಉಪಸ್ಥಿತರಿದ್ದರು.