ಕಲಾವಿದ ಸಂಪ ಲಕ್ಷ್ಮೀನಾರಾಯಣ್ಗೆ ಸನ್ಮಾನ
ಜೋಗ್ ಫಾಲ್ಸ್: ಕಲಾವಿದರಿಗೆ ಜನ ಪ್ರೀತ್ಯಾಧಾರ ವಿಶ್ವಾಸಗಳಿಂದ ನೀಡುವ ಸನ್ಮಾನ ಸರ್ಕಾರ ನೀಡುವ ಸನ್ಮಾನಕ್ಕಿಂತ ದೊಡ್ಡದು. ಇದಕ್ಕೆ ಬೆಲೆ ಕಟ್ಟಲಾಗದು ಎಂಬುದಾಗಿ ಖ್ಯಾತ ಯಕ್ಷಗಾನ ಚೆಂಡೆ ಕಲಾವಿದ ಸಂಪ ಲಕ್ಷ್ಮೀನಾರಾಯಣ್ ತಿಳಿಸಿದರು.
ವಿಪ್ರಕೂಟ ಕಾರ್ಗಲ್ ಇದರ ವತಿಯಿಂದ ಅಮೇರಿಕಾದಲ್ಲಿ ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶಿಸಿ ಬಂದ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಉತ್ತಮ ಪ್ರತಿಕ್ರಿಯೆ: ಸಾಗರದಂತಿರುವ ಕಲೆ ಅಳೆಯುವುದು ಕಷ್ಟ. ಅವರವರ ಮಟ್ಟಕ್ಕೆ ಸಮುದ್ರದ ನೀರನ್ನು ಸೇವಿಸಬಹುದೇ ಹೊರತು ಸಮುದ್ರವನ್ನೇ ಸೇವಿಸಲಾಗದು.
ಕಲೆಗೆ ಯಾವುದೇ ಸೀಮಿತ ಪ್ರದೇಶವಿಲ್ಲ. ವಿಶ್ವದೆಲ್ಲೆಡೆ ಅದಕ್ಕೆ ಮನ್ನಣೆ ಇದೆ. ಶುದ್ಧ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಯಕ್ಷಗಾನ ಕಲೆಯನ್ನು ಅಮೇರಿಕಾದಲ್ಲಿ ಪ್ರದರ್ಶಿಸಿದಾಗ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬ ಅಳುಕಿತ್ತು.
ಆದರೆ, ತಮ್ಮ ತಂಡ ಅಮೇರಿಕಾದಾದ್ಯಂತ 22 ಪ್ರದರ್ಶನ ನೀಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಅನೇಕ ಬಹುಮಾನದ ಕೊಡುಗೆಗಳನ್ನು ಭಾರತೀಯ ಸಂಸ್ಕೃತಿ ಮೆಚ್ಚಿ ಪ್ರೀತ್ಯಾದಾರ ನೀಡಿದರು ಎಂದರು.
ಯುವ ಬರಹಗಾರ ಕಾಳಮಂಜಿ ಎ.ಎನ್. ಗಣಪತಿ, ಸಂಪ ಲಕ್ಷ್ಮೀನಾರಾಯಣ್ ಅವರು ಎಲ್ಲರಿಗೂ ಸಂಪ ಎಂದೇ ಚಿರಪರಿಚಿತ.
ಮಾತಿಗಿಂತ ಕೃತಿ ಮೇಲು ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದ ಶ್ರೀಯುತರು ನೀಡಿದ ಕೊಡುಗೆ ಯಕ್ಷರಂಗಕ್ಕೆ ಅನನ್ಯವಾದುದು ಎಂದರು.
ಜೀವಂತಿಕೆ: ವಿಪ್ರಕೂಟದ ಸಂಚಾಲಕ ಹು.ಬ. ಅಶೋಕ್ ಮಾತನಾಡಿ, ಟಿವಿ ಪ್ರಭಾವದಿಂದ ಸ್ವದೇಶಿ ಸಂಸ್ಕೃತಿ ಮರೆಯುತ್ತಿರುವ ನಮ್ಮಗಳನಡುವೆ, ಅನೇಕ ಆಕ್ರಣಗಳ ನಡುವೆಯು ಜೀವಂತಿಕೆ ಇಂದಿಗೂ ಉಳಿಸಿಕೊಂಡು ಬಂದಿರುವ ಯಕ್ಷಗಾನ ಕಲೆಯ ಸವಿ ಹೊರದೇಶದಲ್ಲಿಯೂ ಉಣಬಡಿಸುವ ಮೂಲಕ ಸಾಧನೆಗೈದ ಸಂಪರವರು ಅಭಿನಂದನಾರ್ಹರು.
ಇಂತಹ ಕಲಾವಿದರನ್ನು ಸನ್ಮಾನಿಸಿ ಪ್ರೋತ್ಸಹಿಸುತ್ತಿರುವುದು ವಿಪ್ರಕೂಟಕ್ಕೆ ಸಂತಸದ ಸಂಗತಿ ಎಂದರು.
ಪ್ರತಿಭಾ ಪ್ರಾರ್ಥಿಸಿದರೆ ಎಂ.ಎಸ್. ಸತೀಶ್ ಸ್ವಾಗತಿಸಿ, ರಮೇಶ್ ಅಡಿಗ ವಂದಿಸಿದರು. ಹಲವರು ಉಪಸ್ಥಿತರಿದ್ದರು.