ಪ್ರೌಢಶಾಲೆ ಕಿಟಕಿ- ಹೆಂಚು ಒಡೆದ ಕಿಡಿಗೇಡಿಗಳು
ಕ.ಪ್ರ.ವಾರ್ತೆ ಟಿ ಆಯನೂರು ಟಿ ಜ.14
ಇಲ್ಲಿನ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ಕಿಟಕಿ, ಹೆಂಚು, ಬಾಗಿಲುಗಳನ್ನು ಕಿಡಿಗೇಡಿಗಳು ಒಡೆದು ಹಾಕಿರುವ ಸಂಗತಿ ಮಂಗಳವಾರ ತಡರಾತ್ರಿ ನಡೆದಿದೆ.
ಇಲ್ಲಿನ ಬಿ.ಎಚ್.ರಸ್ತೆಯ ಪಕ್ಕದಲ್ಲೇ ಇರುವ ಶಾಲೆಯ ಕಟ್ಟಡಗಳ 10ಕ್ಕೂ ಹೆಚ್ಚು ಮರದ ಕಿಟಕಿಗಳನ್ನು ಕಿತ್ತುಹಾಕಿ, ಅದನ್ನು ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಕೊಠಡಿಯೊಳಗೆ ಮದ್ಯದ ಬಾಟಲುಗಳನ್ನು ಎಸೆದು ವಿಕೃತಿ ಪ್ರದರ್ಶಿಸಿದ್ದಾರೆ. ಈ ಘಟನೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಆತಂಕ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.
ಅಕ್ರಮಗಳ ತಾಣ: ರಾತ್ರಿ ವೇಳೆ ಶಾಲಾ ಆವರಣವನ್ನು ಪುಂಡಪೋಕರಿಗಳು ಇಲ್ಲಿ ಮದ್ಯಸೇವನೆ, ಧೂಮಪಾನ ಮಾಡುವ ಅಡ್ಡೆಯಾಗಿ ಮಾಡಿಕೊಂಡಿದ್ದು, ಆವರಣವನ್ನು ಹಾಳುಗೆಡವುತ್ತಿದ್ದಾರೆ ಎಂದು ಸಾರ್ವಜನಿಕರೂ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗ್ರಾಮ ಪಂಚಾಯಿತಿ ಸದಸ್ಯರು, ಸರ್ಕಾರಿ ಶಾಲೆಯ ಕಿಟಕಿ ಬಾಗಿಲುಗಳನ್ನು ಯಾವ ಕಾರಣಕ್ಕೆ ಒಡೆದಿದ್ದಾರೋ ತಿಳಿಯುತ್ತಿಲ್ಲ. ಹೀಗೆ ಒಡೆಯುವುದರಿಂದ ಏನು ಖುಷಿ ಸಿಗುತ್ತದೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಶಾಲೆಯ ಕಾಂಪೌಂಡ್ಗೆ ಗೇಟ್ ಇಲ್ಲ. ಹಾಗೆಯೇ ರಾತ್ರಿ ವೇಳೆ ಶಾಲಾ ಆವರಣಕ್ಕೆ ಭದ್ರತಾ ಸಿಬ್ಬಂದಿ ಕಾವಲಿರುವುದಿಲ್ಲ. ಈ ಹಿಂದೆ ಅನೇಕ ಬಾರಿ ಈ ಶಾಲೆಯಲ್ಲಿ ಕಳ್ಳತನ ಸಹ ನಡೆದಿತ್ತು. ಇದೀಗ ವಿಕೃತ ಮನಸ್ಸುಗಳ ಶಾಲೆಯ ಮೇಲೆ ದಾಳಿ ಮಾಡಿದ್ದು, ಹಾನಿ ಮಾಡಿವೆ.
ಕಳೆದ 15 ದಿನಗಳಿಂದೀಚೆಗೆ ಪದೇ ಪದೇ ಶಾಲಾ ಆವರಣವನ್ನು ಹಾಳು ಗೆಡುವಂತಹ ಘಟನೆಗಳು ನಡೆದಿವೆ ಎಂದು ಶಾಲಾ ವಿದ್ಯಾರ್ಥಿಗಳು ಹೇಳುತ್ತಾರೆ. ಶಾಲೆಯ ಬಾಗಿಲನ್ನೂ ಸಹ ಒಡೆದಿದ್ದರು. ಇದೀಗ ಶಾಲೆಯ ಎಲ್ಲಾ ಕಿಟಕಿಗಳನ್ನು ಒಡೆದುಹಾಕಿವುದು ಬೇಸರ ತರಿಸುತ್ತದೆ ಎಂದು ತಿಳಿಸಿದ್ದಾರೆ.
ಪುಡಾರಿಗಳ ಪುಂಡಾಟಿಕೆ: ಶಾಲಾ ಆವರಣದಲ್ಲೇ ಕಟ್ಟಡ ಕಾಮಗಾರಿಯೊಂದು ನಡೆಯುತ್ತಿದ್ದು, ಇಲ್ಲಿನ ಕಾರ್ಮಿಕರಲ್ಲಿ ಘಟನೆ ಕುರಿತು ಕನ್ನಡಪ್ರಭ ವಿಚಾರಿಸಿದಾಗ, ರಾತ್ರಿ ವೇಳೆ ಅನೇಕ ಪುಂಡಪೋಕರಿಗಳು ಇಲ್ಲಿಗೆ ಬಂದು ಕುಕೃತ್ಯದಲ್ಲಿ ತೊಡಗಿರುತ್ತಾರೆ. ನಾವು ವಿಚಾರಿಸಿದರೆ ನಮ್ಮನ್ನೇ ನಿಂದಿಸುತ್ತಾರೆ. ಹೀಗಾಗಿ ಅವರ ವಿಚಾರದಲ್ಲಿ ನಾವು ತಲೆ ಹಾಕಲಿಲ್ಲ ಎಂದು ಅಭಿಪ್ರಾಯಿಸಿದರು.
ಈ ಕೂಡಲೇ ಶಾಲೆಗೆ ಗೇಟ್ ವ್ಯವಸ್ಥೆಯಾಗಬೇಕು, ರಾತ್ರಿ ವೇಳೆಗಾಗಿ ಕಾವಲು ಸಿಬ್ಬಂದಿ ನೇಮಿಸಬೇಕೆಂಬುದು ಶಾಲಾ ಶಿಕ್ಷಕ ಸಮುದಾಯದ ಆಗ್ರಹ.
ಶಾಲೆಯ ಮೇಲೆ ದಾಳಿ ನಡೆಸುವಂತಹ ಈ ದುಷ್ಕೃತ್ಯದ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಸಾದ್ಯತೆಯೂ ಇದೆ. ರಾಜಕೀಯ ಕಾರಣಗಳಿಂದಲೂ ದಾಳಿ ನಡೆದಿರಬಹುದೆಂದು ಸ್ಥಳೀಯರು ಹೇಳುತ್ತಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ಕೂಡ ಕೇಳಿಬಂದಿದೆ.