ಭಿಕ್ಷೆ ಬೇಡಿ ರಸ್ತೆ ರಿಪೇರಿ: ಮಧು
ಕನ್ನಡಪ್ರಭ ವಾರ್ತೆ ಸೊರಬ ಜ.15
ತಾಯಿಯನ್ನು ಮುಂದಿಟ್ಟುಕೊಂಡು ಕಣ್ಣೀರು ಹಾಕಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಭೆ- ಸಮಾರಂಭಗಳಲ್ಲಿ ಹಗುರವಾಗಿ ಮಾತನಾಡುತ್ತಿರುವ ಮಾಜಿ ಶಾಸಕ ಎಚ್. ಹಾಲಪ್ಪ ಅವರಿಗೆ ಶಕುಂತಲಾ ಬಂಗಾರಪ್ಪನವರ ಹೆಸರು ಹೇಳಲು ಯೋಗ್ಯತೆ ಇಲ್ಲ ಎಂದು ಜೆಡಿಎಸ್ ಮುಖ್ಯ ಸಚೇತಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಎಚ್. ಹಾಲಪ್ಪ ಮನುಷ್ಯ ಜಾತಿಗೆ ಸೇರದ ಮೃಗೀಯತೆ ಹೊಂದಿರುವ ವ್ಯಕ್ತಿ. ಅವರಿಗೆ ತಂದೆ- ತಾಯಿ ಬಗ್ಗೆ ಗೌರವ, ಮರ್ಯಾದೆ, ಸ್ನೇಹಿತರೊಂದಿಗೆ ಆತ್ಮೀಯತೆ ಮತ್ತು ಮಾನವೀಯತೆಯ ಅರ್ಥ ಕೂಡಾ ಗೊತ್ತಿಲ್ಲದ ಸಂಸ್ಕೃತಿಹೀನ ಮನುಷ್ಯ. ಹಾಗಾಗಿ ಸ್ನೇಹಿತರ ಮನೆಯಲ್ಲಿ ಹದ್ದಿನ ಕಣ್ಣಾಡಿಸುವುದು ಅವರಿಗೆ ಅಭ್ಯಾಸವಾಗಿದೆ ಎಂದು ಲೇವಡಿ ಮಾಡಿದರು.
ಶೀಘ್ರ ರಸ್ತೆ ದುರಸ್ತಿ: ತಾಲೂಕಿನ ಆನವಟ್ಟಿ- ಶಿರಾಳಕೊಪ್ಪ ಮಾರ್ಗದ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಆದ್ದರಿಂದ ಮುಂದಿನ 7 ದಿನಗಳೊಳಗೆ ಲೋಕೋಪಯೋಗಿ ಸಚಿವರು ಹಣ ಬಿಡುಗಡೆ ಮಾಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾವೇ ಮುಂದೆ ನಿಂತು ಆನವಟ್ಟಿ-ಶಿರಾಳಕೊಪ್ಪ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಲಾಗುವುದು. ಇಲ್ಲದಿದ್ದರೆ ಸಂಘ-ಸಂಸ್ಥೆಗಳ ಜೊತೆಗೂಡಿ ಸಾರ್ವಜನಿಕರಿಂದ ಭಿಕ್ಷೆ ಬೇಡಿ ರಸ್ತೆ ರಿಪೇರಿ ಮಾಡಲಾಗುವುದು ಎಂದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಮಹಿಳಾ ಘಟಕದ ಅಧ್ಯಕ್ಷೆ ಶೇಖರಮ್ಮ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಶಬ್ಬೀರ್, ವಕ್ತಾರ ಎಂ.ಡಿ. ಶೇಖರ್, ಮುಖಂಡರಾದ ಶ್ರೀಪಾದ ಹೆಗಡೆ ನಿಸರಾಣಿ, ಪಡವಗೋಡು ಹುಚ್ಚಪ್ಪ, ಲೋಕೇಶ್ ಗಾಳಿಪುರ, ಮಂಚಿ ಸೋಮಪ್ಪ, ಬಸವೇಶ್ವರ, ಪರಶುರಾಮಪ್ಪ ಸಣ್ಣಬೈಲ್ ಮೊದಲಾದವರು ಇದ್ದರು.