ಕನಿಷ್ಠ ಭೂಮಿಯಲ್ಲಿ, ಗರಿಷ್ಠ ಆದಾಯ ನಮ್ಮ ಉದ್ದೇಶ
ಸಂದರ್ಶನ: ಶ್ರೀಕಾಂತ ಭಟ್
ಟಿ ಮಲೆನಾಡು ಎದುರಿಸುತ್ತಿರುವ ವಲಸೆ ಸಮಸ್ಯೆಗೆ ಪರಿಹಾರವಿದೆಯೇ?
ಮಲೆನಾಡಿನಿಂದ ಕೃಷಿಕರು ವಲಸೆ ಹೋಗುತ್ತಿರುವುದು ಆತಂಕಕಾರಿ. ಅದರಲ್ಲೂ ವಿಶೇಷವಾಗಿ ಯುವಕರು ವಲಸೆ ಹೋಗುತ್ತಿರುವುದು ನಾವೆಲ್ಲಾ ಗಮನಿಸಿದ್ದೇವೆ. ಹಳ್ಳಿಗಳಲ್ಲಿ ಆದಾಯದ ಅವರಿಗೆ ಕೊರತೆ ಕಾಣಿಸುತ್ತಿದೆ, ಕೃಷಿಯಲ್ಲಿ ವರ್ಷದಲ್ಲಿ ಒಂದು- ಎರಡೂ ಅಥವಾ ಕೆಲವು ಬಾರಿ ಮಾತ್ರ ಆದಾಯ ಬರಬಹುದು, ಹಿರಿಯರಿಗೆ ಅದು ರೂಢಿಯಾಗಿದೆ. ಆದಾಯ ಬಂದಾಗ ಗಳಿಸಿ, ವರ್ಷಪೂರ್ತಿ ಬಳಸುವುದು ಗೊತ್ತಿದೆ.
ಆದರೆ, ಯುವಕರಿಗೆ ಈ ನಿರಂತರತೆ ಸಾಧ್ಯವಾಗುತ್ತಿಲ್ಲ. ಪೇಟೆಯ ಆಕರ್ಷಣೆ ಮತ್ತೊಂದು ಕಾರಣ. ನಗರ ಜೀವನದ ಆಕರ್ಷಣೆ, ಕಡಮೆ ಆದಾಯವಾದರೂ ಹಳ್ಳಿಯ ಮಳೆಗಾಲದ ಜೀವನ ಸಹನೀಯವಾಗುತ್ತಿಲ್ಲ ಎಂಬ ಕಾರಣಕ್ಕೆ ಹೋಗುತ್ತಿದ್ದಾರೆ. ಹಾಗೆಯೇ ಹಳ್ಳಿ ಯುವಕರು ವಿದ್ಯಾವಂತರಾಗಿದ್ದಾರೆ. ಉದ್ಯೋಗದ ಲಾಲಸೆಯಿಂದಾಗಿ ಖಂಡಿತವಾಗಿ ಉದ್ಯೋಗಾವಕಾಶಕ್ಕಾಗಿ ವಲಸೆ ಹೋಗುತ್ತಿದ್ದಾರೆ.
ಆಶಾದಾಯಕವೆಂದರೆ 5-10 ವರ್ಷ ನಗರಗಳಲ್ಲಿ ಉದ್ಯೋಗ ಮಾಡಿ, ಮೂಲಧನ ಮಾಡಿಕೊಂಡು ಹಳ್ಳಿಗೆ ಬರುತ್ತಿರುವುದನ್ನೂ ನಾವು ಗಮನಿಸಿದ್ದೇವೆ. ಇದು ಇನ್ನಷ್ಟು ಹೆಚ್ಚಾಗಬೇಕು ಎಂಬುದು ನನ್ನ ಭಾವನೆ.
ಟಿ ಕೃಷಿಯತ್ತ ಸೆಳೆಯಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಲ್ಪನೆ ಅಥವಾ ಯೋಜನೆ ಏನು?
ನಮ್ಮ ಮುಖ್ಯ ದೃಷ್ಟಿಕೋನದಲ್ಲಿ ಮಿಶ್ರ ಬೆಳೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದೇವೆ. ಈ ಮಿಶ್ರ ಬೆಳೆಯಲ್ಲಿ ದಿನವೂ ಆದಾಯ ಬರುವ, ವಾರಕ್ಕೆ ಆದಾಯ ಬರುವ, ಮಾಸಿಕ, ತ್ರೈಮಾಸಿಕ ಮತ್ತು ವರ್ಷದಲ್ಲಿ 2 ಬಾರಿ ಆದಾಯ ಬರುವಂತೆ ಕೃಷಿ ವಿಂಗಡಿಸಿದ್ದೇವೆ.
ಪುಷ್ಪ ಕೃಷಿಯಲ್ಲಿ ದಿನವೂ ಹಾಗೂ ತರಕಾರಿಯಲ್ಲಿ ವಾರಕ್ಕೊಮ್ಮೆ ಆದಾಯ ತೆಗೆಯಬಹುದು. ಅದೇ ರೀತಿಯಲ್ಲಿ ಪೊಪ್ಪಾಯಿ ಇತರೆ ಹಣ್ಣು, ತರಕಾರಿ ಬೆಳೆಸಿದರೆ ತ್ರೈಮಾಸಿಕ ಆದಾಯ ಪಡೆಯಬಹುದು. ವರ್ಷಪೂರ್ತಿ ಆದಾಯ ಬರುವಂತಹವೂ ಇದೆ. ಈ ರೀತಿ ಕೃಷಿಕರನ್ನು ಬೆಂಬಲಿಸುತ್ತಿದ್ದೇವೆ. ಜೊತೆಗೆ ಹೈನುಗಾರಿಕೆ ಮತ್ತು ಬೇರೆ ಬೇರೆ ರೀತಿ ಕೃಷಿಗೆ ಒತ್ತು ಕೊಡುತ್ತಿದ್ದೇವೆ.
ಟಿ ಕೃಷಿಕರನ್ನು ಯಾವ ರೀತಿ ಕೈಹಿಡಿಯಲಾಗುತ್ತಿದೆಯೇ?
ಕೃಷಿಕರು ತಕ್ಷಣಕ್ಕೆ ಹಣ ಬರಬೇಕು ಎಂದು ಅಪೇಕ್ಷಿಸುತ್ತಾರೆ. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕಿರು ಆರ್ಥಿಕ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಬೇಕಾದ ಹಣ ಸಿಗುವಂತಹ ವ್ಯವಸ್ಥೆ ಆಗುತ್ತದೆ. ವಾರಕ್ಕೊಮ್ಮೆ ಕಂತಿನ ಹಣ ಕಟ್ಟಿ ಹಣದ ವ್ಯವಹಾರವನ್ನು ಸಂಘಟನೆ ಮೂಲಕ ಸುಲಭವಾಗಿ ಮಾಡಿಕೊಳ್ಳಲು ಸಾದ್ಯವಾಗುತ್ತದೆ.
ಟಿ ಕೃಷಿ ಆಸಕ್ತರ ಆತಂಕಕ್ಕೆ ಪರಿಹಾರವಿದೆಯೇ?
ಗ್ರಾಮೀಣ ಕೃಷಿ ಕೂಲಿಯಾಳುಗಳ ಸಮಸ್ಯೆ ಎದುರಿಸುತ್ತಿದೆ. ಹಿಂದಿನ ಕಾಲದಲ್ಲಿ ಸಾಕಷ್ಟು ಕೂಲಿಯಾಳುಗಳು ಸಿಗುತ್ತಿದ್ದರು, ಇಂದು ಕೊರತೆ ಎದುರಾಗಿದೆ. ಸ್ವತಃ ದೈಹಿಕ, ಮಾನಸಿಕ ಶಕ್ತಿ ಯುವಕರಲ್ಲಿಲ್ಲ. ಅದೃಷ್ಟವಶಾತ್ ಯುಗ ಪರಿವರ್ತನೆಯಾಗಿದೆ. ತಂತ್ರಜ್ಞಾನದ ಬಳಕೆ ನಮ್ಮ ಸಹಾಯಕ್ಕೆ ಬಂದಿದೆ. ಆಧುನಿಕ ಕೃಷಿ ಉಪಕರಣ, ತಂತ್ರಜ್ಞಾನ, ಔಷಧಿ, ಗೊಬ್ಬರ, ಪೋಷಕಾಂಶಗಳನ್ನು ಕೃತಕವಾಗಿ ಕೊಡುವ ಸಾಧ್ಯತೆ ಇದೆ. ಅಡಕೆ ರೋಗಕ್ಕೆ ಔಷಧಿ ಸಿಂಪಡಿಸುತ್ತಿದ್ದರು. ಈಗ ಔಷಧಿ ಪೋಷಕಾಂಶ ಎರಡನ್ನೂ ಕೊಡಲು ಅವಕಾಶ ಬಂದಿದೆ.
ಹಾಗಾಗಿ ಈ ರೀತಿಯ ಕೆಲವು ಪರಿವರ್ತನೆಗಳು ವೈಜ್ಞಾನಿಕವಾಗಿ ಆಗಿದೆ. ಬಾಳೆಹಣ್ಣು ಬೆಳೆಸುವವರಿಗೆ ಟಿಶ್ಯೂ ಕಲ್ಚರ್ ಬೆಳೆ ಗಿಡಗಳು- ತರಕಾರಿ ಬಂದಿದೆ. ಬತ್ತದ ಬೇಸಾಯ ಮಾಡುವವರಿಗೆ ಶ್ರೀಪದ್ಧತಿ ಬಂದಿದೆ. ಕಡಿಮೆ ಹಿಡುವಳಿಯಲ್ಲಿ ಹೆಚ್ಚು ಆದಾಯ ಗಳಿಸುವ ಅವಕಾಶ ಬಂದಿದೆ.
ಇನ್ನೂ ಬೇರೆ ಬೇರೆ ವಿಧಾನ ಹೇಳಿಕೊಡುತ್ತೇವೆ. ನಮ್ಮ ಉದ್ದೇಶ ಇರುವುದು ತಮ್ಮ ಕನಿಷ್ಠ ಭೂಮಿಯಲ್ಲಿ, ಗರಿಷ್ಠ ಆದಾಯ ಪಡೆಯಬೇಕು. ಇದಕ್ಕೆ ಬೇಕಾದ ಮಾರ್ಗದರ್ಶನ ಅವರಿಗೆ ಕೊಟ್ಟಾಗ ಕೈತುಂಬ ಕೆಲಸ ಇರುತ್ತದೆ. ವರ್ಷವಿಡೀ ಕೆಲಸವಿರುತ್ತದೆ ಮತ್ತು ಆದಾಯ ನಿರಂತರವಾಗಿ ಇರುತ್ತದೆ ಎಂಬುದು ನಮ್ಮ ಅಭಿಪ್ರಾಯ.
ಟಿ ಈ ಕೃಷಿ ಮೇಳ ಹೇಗೆ ರೈತರಿಗೆ ಸಹಕಾರಿ
ಮೇಳದಲ್ಲಿ ರೈತರ ತಿಳಿವಳಿಕೆಗೆ ಅಗತ್ಯವಾದ ಸಾಕಷ್ಟು ಗೋಷ್ಠಿಗಳನ್ನು ಇಟ್ಟಿದ್ದೇವೆ. ಮಾಹಿತಿ ಕೊಡುವುದು ನಮ್ಮ ಉದ್ದೇಶ, ಕೃಷಿಕರು ಮಾಹಿತಿ ಪಡೆಯಬೇಕು. ಇಲ್ಲಿ ಸ್ಟಾಲ್‌ಗಳು ಇವೆ. ಅಲ್ಲಿ ಮಾಹಿತಿ ಕೊಡುತ್ತೇವೆ, ಬ್ಯಾಂಕ್, ಸರ್ಕಾರಿ ಇಲಾಖೆ, ಇನ್‌ಶ್ಯೂರೆನ್ಸ್ ಬೇರೆ ಬೇರೆ ಇಲಾಖೆ ಬರುವುದರಿಂದ ಪ್ರಯೋಜನ ಪಡೆಯಬಹುದು. ರೈತರಿಗೆ ವೇದಿಕೆಯಿಂದ ತಿಳುವಳಿಕೆ ಬರುತ್ತದೆ, ಸ್ಟಾಲ್‌ಗಳಲ್ಲಿ ನೋಡಿ ತಿಳಿಯಬಹುದು, ಯಂತ್ರೋಪಕರಣ ಸ್ಪರ್ಷಿಸಿ ತಿಳಿಯಲು ಅವಕಾಶವಿದೆ.