ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

Rashmi Kasaragodu
Updated On : 17 Jan 2014, 11:36 am

ಕ.ಪ್ರ.ವಾರ್ತೆ, ಸೊರಬ, ಜ.16
ರಸ್ತೆಯ ಅವ್ಯವಸ್ಥೆಯಿಂದಾಗಿ ಶಿವಮೊಗ್ಗ -ತಡಸ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಕೂಡಲೆ ರಸ್ತೆ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದರೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಂದು ಆನವಟ್ಟಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಉಮೇಶ್ ಉಡುಗಣಿ ಎಚ್ಚರಿಸಿದರು..
ಶಿವಮೊಗ್ಗ-ತಡಸ ರಸ್ತೆ ದುರಸ್ತಿಗೆ ಆನವಟ್ಟಿಯ ಬಸ್ ನಿಲ್ದಾಣದ ಸರ್ಕಲ್ ಬಳಿ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕರು ಗುರುವಾರ ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಆಮೆ ನಡಿಗೆ ಗತಿಯಲ್ಲಿ ಸಾಗುತ್ತಿರುವ ತಡಸ-ಶಿವಮೊಗ್ಗ ಹೆದ್ದಾರಿಯ ಉದ್ದಗಲಕ್ಕೂ ಗುಂಡಿಗಳು ಬಿದ್ದಿವೆ. ಆನವಟ್ಟಿ ಪೇಟೆಯಲ್ಲಿ ಹಾದುಹೋಗುವ ಈ ಮಾರ್ಗದಲ್ಲೂ ಗುಂಡಿಗಳಿಗೆ ಬರವಿಲ್ಲ. ಇಂತಹ ರಸ್ತೆ ಅವ್ಯವಸ್ಥೆಯಿಂದಾಗಿ ದಿಕ್ಕೆಟ್ಟ ವಾಹನ ಮಾಲೀಕರು ಮತ್ತು ಚಾಲಕರು ಸಂಚಾರಕ್ಕೆ ಪರಿತಪಿಸುವಂತಾಗಿದೆ ಎಂದರು.
ನಿರಂತರ ಪ್ರತಿಭಟನೆ ಎಚ್ಚರಿಕೆ:  ಬಸ್ಸಿನಲ್ಲಿ ವೃದ್ಧರು, ಮಹಿಳೆಯರು, ಗರ್ಭಿಣಿಯರು ಮತ್ತು ಸಣ್ಣ ಮಕ್ಕಳನ್ನು ಕೂರಿಸಿಕೊಂಡು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯ ಮನೆಗಳ ಜನರು ಅಲರ್ಜಿಯಿಂದ ಬಳಲುವಂತಾಗಿದೆ. ಆನವಟ್ಟಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದಿಂದ ಸೈಕಲ್‌ನಲ್ಲಿ 15-20 ಕಿ.ಮೀ. ಬರುವಂತಾಗಿದೆ.  ರಸ್ತೆ ದುಸ್ಥಿತಿಯಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುವಂತಾಗಿದೆ ಎಂದು ಆಕ್ಷೇಪವ್ಯಕ್ತಪಡಿಸಿದರು.
ಸಬೂಬು:  ವಕೀಲ ಶಿವಪ್ಪ ದ್ವಾರಹಳ್ಳಿ ಮಾತನಾಡಿ, ರಸ್ತೆ ದುರಸ್ತಿಗಾಗಿ ಅಧಿಕಾರಿಗಳ ಬಳಿ ಹೋದರೆ ರಸ್ತೆ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮಕ್ಕೆ ಸೇರುತ್ತದೆ. ಆದ್ದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿ ಕೈಚೆಲ್ಲುತ್ತಾರೆ.
 ಜನಪ್ರತಿನಿಧಿಗಳು ರಸ್ತೆ ಕಡೆ ನೋಡುತ್ತಿಲ್ಲ. ಇವರ ಅಸಡ್ಡೆತನದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ನೂತನ ಸರ್ಕಾರ ಆಡಳಿತಕ್ಕೆ ಬಂದು ಹಲವು ತಿಂಗಳಾದರೂ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ ಎಂದರು.
ಪ್ರತಿಭಟನಾಕಾರರು ನಾಡ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಚಂದ್ರಪ್ಪ ವಕೀಲರು, ಹನುಮೇಶ ತಲ್ಲೂರು, ಹುಚ್ಚಪ್ಪ ತಲ್ಲೂರು, ಹೊನ್ನಪ್ಪ, ಮಂಜಪ್ಪ, ಮಣಿಕಂಠ, ನಾರಾಣಪ್ಪ, ರೈತ ಮುಖಂಡ ಶಿವಣ್ಣ, ಹರೀಶ್.ಕೆ ಗಿರೀಶ್, ಲೋಕೇಶ್, ಸೇರಿದಂತೆ ನೂರಾರು ಜನರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement