ರುದ್ರಪುರಶ್ಚರಣಪೂರ್ವಕ ಮಹಾರುದ್ರಯಾಗ ಪೂರ್ಣಾಹುತಿ
ಹೊಸನಗರ: ಇತಿಹಾಸದಲ್ಲಿ ಶೃಂಗೇರಿ ಪೀಠದಿಂದ ಬಿದನೂರಿಗೆ ಶಾಪವಿತ್ತು ಎಂಬ ಪ್ರತೀತಿ ಇತ್ತು. ಆದರೆ ಇಂದು ಬಿದನೂರಿನ ಆರಾಧ್ಯಧೈವ ನೀಲಕಂಠೇಶ್ವನಿಗೆ ಗುರುಪೀಠದಿಂದ ಪೂಜೆ ಸಂಪನ್ನಗೊಂಡಿದೆ. ಇದರಿಂದ ಇಂದಿನ ಶಾಪ ವಿಮೋಚನೆಯಾಗಿದೆ ಎಂದು ಶೃಂಗೇರಿ ಶಾರದಾಪೀಠದ ಭಾರತೀತೀರ್ಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿದನೂರು ನಗರದ ನೀಲಕಂಠೇಶ್ವರ ದೇಗುಲದಲ್ಲಿ ಸಪರಿವಾರ ನೀಲಕಂಠೇಶ್ವರ ಮಹಾರುದ್ರಯಾಗ ಸಮಿತಿ ಹಮ್ಮಿಕೊಂಡಿದ್ದ ರುದ್ರಪುರಶ್ಚರಣಪೂರ್ವಕ ಮಹಾರುದ್ರಯಾಗ ಪೂರ್ಣಾಹುತಿಯ ಸಾನ್ನಿಧ್ಯ ವಹಿಸಿದ ನಂತರ ಶ್ರೀಗಳು ಆಶೀರ್ವಚನ ನೀಡಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮ: ಮಹಾರುದ್ರಯಾಗದ 3ನೇ ದಿನ ಶ್ರೀಗಳು ಬೆಳಗ್ಗೆ ಆಗಮಿಸುತ್ತಿದ್ದಂತೆ ಭಕ್ತರು ಪೂರ್ಣಕುಂಭ ಭಕ್ತಿಪೂರ್ವಕ ಸ್ವಾಗತ ನೀಡಿ ಬರಮಾಡಿಕೊಂಡರು. ನಂತರ ಶ್ರೀಗಳ ಸಮ್ಮುಖದಲ್ಲಿ ಯಾಗದ ಪೂರ್ಣಾಹುತಿಯು ಸಂಪನ್ನಗೊಂಡಿತು. ನೀಲಕಂಠೇಶ್ವನ ಮೂರ್ತಿಗೆ ಶೃಂಗೇರಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.ಶೃಂಗೇರಿ ಪೀಠದ ಆಸ್ಥಾನ್ ವಿದ್ವಾನ್, ರುದ್ರಯಾಗ ಸಮಿತಿ ಗೌರವಾಧ್ಯಕ್ಷ ವಿನಾಯಕ ಉಡುಪ ಭಿನ್ನವತ್ತಳೆ ಸಲ್ಲಿಸಿದರು. ಕೃಷ್ಣಮೂರ್ತಿ ನಿರ್ವಹಿಸಿದರು.