ಶಿಕ್ಷಕರ ಕೊರತೆ: ಬಿಇಒ ಕಚೇರಿ ಮುತ್ತಿಗೆ
ಹೊಸನಗರ: ತಾಲೂಕಿನ ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರು ನಾನಾ ಕಾರಣಗಳಿಂದ ಶಾಲೆ ಆಗಮಿಸುತ್ತಿಲ್ಲ. ಶಾಲೆಗೆ ಶಿಕ್ಷಕರಿಲ್ಲದೆ ತುಂಬಾ ದಿನವಾದರೂ ಯಾವೊಬ್ಬ ಅಧಿಕಾರಿ ಕೂಡ ಇತ್ತ ಮುಖ ಮಾಡುತ್ತಿಲ್ಲ ಎಂದು ಆರೋಪಿಸಿ ಮಾದಾಪುರ ಗ್ರಾಮಸ್ಥರು ಶಾಲಾ ಮಕ್ಕಳು ಮತ್ತು ಪೋಷಕರು ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಾದಾಪುರ ಶಾಲೆಯಲ್ಲಿಎರಡು ಶಿಕ್ಷಕರಿದ್ದಾರೆ. ಆದರೆ, ಅವರು ಶಾಲೆಗೆ ಬರಲಾಗುತ್ತಿಲ್ಲ. ಶಿಕ್ಷಕ ನಾಗರಾಜ ಉನ್ನತ ವ್ಯಾಸಂಗಕ್ಕಾಗಿ ರಜೆ ಕೋರಿ ಹೋಗಿರುತ್ತಾರೆ. ಮತ್ತೊಬ್ಬ ಶಿಕ್ಷಕಿ ಸಲ್ಮಾ ಫರ್ವಿನ್ ಅನಾರೋಗ್ಯದಿಂದ ಬಳಲುತ್ತಿದ್ದು, ರಜೆಯಲ್ಲಿ ಇದ್ದಾರೆ. ಹಾಗಾಗಿ ಶಾಲೆಯಲ್ಲಿ ಶಿಕ್ಷಕರು ಇಲ್ಲದಂತಾಗಿದೆ. ಡಿಸೆಂಬರ್ ತಿಂಗಳಿಂದ ಶಾಲೆಯಲ್ಲಿ ಸರಿಯಾದ ಪಾಠ ನಡೆದಿಲ್ಲ ಎಂದು ಆರೋಪಿಸಿದರು.
ಈ ಕುರಿತು ಶಿಕ್ಷಣ ಇಲಾಖೆಗೆ ಹತ್ತಾರು ಬಾರಿ ಭೇಟಿ ಮಾಡಿದಾಗಲೂ ಯಾವುದೇ ಉತ್ತರವಾಗಲಿ, ಬದಲಿ ಕ್ರಮ ಕೈಗೊಳ್ಳುವ ಮಾತು ಬಂದಿಲ್ಲ. ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಎಂದು ಪ್ರಶಸ್ತಿ ಪಡೆದ ವೀರಭದ್ರಪ್ಪರಿಗೆ ಮಾದಾಪುರ ಶಾಲೆ ಸಮಸ್ಯೆ ಯಾಕೆ ತಿಳಿಯುತ್ತಿಲ್ಲ. ಇನ್ನಾದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಶಿಕ್ಷಣ ಇಲಾಖೆ ಕೂಡಲೇ ಶಿಕ್ಷಕರ ನೇಮಕ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.
ನೇಮಕ: ಬಿಇಒ ಅನುಪಸ್ಥಿತಿಯಲ್ಲಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಇಲಾಖಾಧಿಕಾರಿ ಈಶ್ವರಪ್ಪ, ಇಂದಿನಿಂದಲೇ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.