ಅಸ್ತಿತ್ವದ ಆತಂಕದಲ್ಲಿ ಶಿಕಾರಿಪುರ ಬಿಜೆಪಿ ಕಾರ್ಯಕರ್ತರು
ಶಿಕಾರಿಪುರ: ರಾಜ್ಯ ಮಟ್ಟದಲ್ಲಿ ಕೆಜೆಪಿ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿದ್ದರೂ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಕೆಜೆಪಿ ವಿಲೀನದಿಂದ ತಮ್ಮ ಅಸ್ಥಿತ್ವಕ್ಕೆ ಧಕ್ಕೆ ಬರುವ ಭಯದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
ಪಟ್ಟಣದ ಜಯನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ರಚನೆಯ ನಂತರದಲ್ಲಿ ಪುರಸಭಾ ಚುನಾವಣೆ ಮತ್ತಿತರ ಸಂದರ್ಭದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯಲಿಲ್ಲ ಎಂದು ಅಸಮಾಧಾನಗೊಂಡ ಹಲವರು ಬಿಜೆಪಿಯಲ್ಲಿಯೇ ಗುರುತಿಸಿಕೊಂಡಿದ್ದು ಇದೀಗ ಪುನಃ ಕೆಜೆಪಿಯ ಮುಖಂಡರು ಬಿಜೆಪಿಯಲ್ಲಿ ವಿಲೀನಗೊಂಡಲ್ಲಿ ತಾವು ಶಾಶ್ವತವಾಗಿ ಮೂಲೆಗುಂಪಾಗುವ ಭೀತಿಯಲ್ಲಿದ್ದಾರೆ.
ಭಿನ್ನಾಭಿಪ್ರಾಯ ಮರೆಯೋಣ: ಸಭೆಯಲ್ಲಿ ಭಾಗವಹಿಸಿದ್ದ ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಮಾತನಾಡಿ, ಮುಂದಿನ ಪೀಳಿಗೆಗೆ ಸುಭಿಕ್ಷ, ಸಮೃದ್ಧ ಶಕ್ತಿಶಾಲಿ ದೇಶ ನಿರ್ಮಾಣಕ್ಕಾಗಿ ನರೇಂದ್ರಮೋದಿ ಪ್ರಧಾನಿಯಾಗುವುದು ಅತ್ಯವಶ್ಯಕವಾಗಿದೆ. ದೇಶದ ಸಂಪೂರ್ಣ ಅಭಿವೃದ್ಧಿಗಾಗಿ ಕೇವಲ ಮೋದಿಗಾಗಿ ಭಿನ್ನಾಭಿಪ್ರಾಯವನ್ನು ಮರೆಯೋಣ ಎಂದ ಅವರು ಉಸಿರು ಇರುವವರೆಗೂ ಪಕ್ಷದಲ್ಲಿದ್ದು ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ ಎಂದರು.
ಜಿಲ್ಲಾ ಲೋಹ ಸಂಗ್ರಹ ಸಮಿತಿ ಸಂಚಾಲಕ ರಾಘವೇಂದ್ರ ಮಾತನಾಡಿ, ಪಕ್ಷದಲ್ಲಿನ ಪದಾಧಿಕಾರಿಗಳು 3 ವರ್ಷ ಕಡ್ಡಾಯವಾಗಿದ್ದು ಹೊಸಬರ ಸೇರ್ಪಡೆಯಿಂದ ಧಕ್ಕೆಯಾಗುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸದಸ್ಯ ಹಾಗೂ ತಾ.ಅಧ್ಯಕ್ಷ ರುದ್ರಪ್ಪ ದಾನೇರ ಮಾತನಾಡಿ, ಲೋಕಸಭಾ ಅಭ್ಯರ್ಥಿಯ ಬಗ್ಗೆ ಚಿಂತಿಸದೆ ಕೆಜೆಪಿ ಸೇರ್ಪಡೆ ಬಗ್ಗೆ ಮೂಲೆಗುಂಪಾಗುವ ಭಯ ಬಿಟ್ಟು ಮೋದಿಗಾಗಿ ಪಕ್ಷದ ಸಂಘಟನೆಯನ್ನು ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಲೋಹ ಸಂಗ್ರಹ ಸಮಿತಿ ತಾ.ಸಂಚಾಲಕ ಮಂಜುನಾಥ್ ಬೇಗೂರು, ಮುಖಂಡ ಆರ್.ಎಸ್. ನಾಯಕ್, ಮಲ್ಲೇಶಪ್ಪ, ಯುವರಾಜ, ಗಿರೀಶ್ ಧಾರವಾಡದ, ಸುರೇಶ್, ಶಂಕರನಾಯ್ಕ, ವಾಸು, ಎಸ್ಸಿ ಯುವ ಮೋರ್ಚಾ ಅಧ್ಯಕ್ಷ ಸಂಗಮೇಶ್ ಮತ್ತಿತರರು ಉಪಸ್ಥಿತರಿದ್ದರು.