ಕಾರ್ಮಿಕರ ಕೊರತೆಗೆ ಯಾಂತ್ರೀಕರಣವೇ ಪರಿಹಾರ
ಕ.ಪ್ರ. ವಾರ್ತೆ ಶಿವಮೊಗ್ಗ ಜ. 17
ರೈತ ಒಬ್ಬ ಯೋಗಿ. ಆತನ ತ್ಯಾಗದಿಂದಲೇ ನಮ್ಮ ಬದುಕು, ಜೀವನ, ದೇಹದ ಆರೋಗ್ಯ ಉಳಿದಿದೆ. ಇಂದು ಯೋಗಿಯಲ್ಲದವರು ಪೇಟೆ ಕಡೆ ಮುಖಮಾಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಹಮ್ಮಿಕೊಂಡಿರುವ ಎರಡು ದಿನಗಳ ಕೃಷಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಕೃಷಿ ಪದಾರ್ಥದ ಹಿಂದೆ ರೈತರ ಅಪಾರ, ಅಗಾಧ ತ್ಯಾಗ, ಪರಿಶ್ರಮವಿದೆ. ಅವರನ್ನು ನಾವೆಲ್ಲರೂ ಸ್ಮರಿಸಬೇಕು. ಹಾಗೆಯೇ ಅನೇಕ ಕೃಷಿಕರು ಇಂದು ಪೇಟೆಗೆ ವಲಸೆ ಬರುತ್ತಿದ್ದಾರೆ. ತ್ಯಾಗದ ವಿಚಾರ ಬೇಡ, ಪೇಟೆಯಲ್ಲಿ ನಿತ್ಯ 100 ರುಪಾಯಿ ಕೂಲಿ ಸಿಕ್ಕರೆ ಸಾಕೆಂಬುದು ಅವರ ಭಾವನೆಯಾಗಿದೆ ಎಂದು ಹೇಳಿದರು.
ಕೃಷಿಕ ಬಳಸಲಿ: ಇಂತಹ ಸಂದರ್ಭದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೃಷಿಕರನ್ನು ಉತ್ತೇಜಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮ ಹಾಕಿಕೊಂಡಿದೆ. ವಿವಿಧ ರೀತಿಯ ಸವಲತ್ತು ಕಲ್ಪಿಸಿ, ಮಾಹಿತಿ ನೀಡಿ, ತಂತ್ರಜ್ಞಾನ ಕೊಡಿಸುವ ಕೆಲಸವನ್ನೂ ಮಾಡಿಕೊಡಲಾಗುತ್ತಿದೆ. ಇದನ್ನು ಕೃಷಿಕನಾದವನು ಬಳಸಿಕೊಂಡು ಸುಸ್ಥಿರನಾಗಬೇಕೆಂದು ಕರೆ ನೀಡಿದರು.
ಸಂಸ್ಥೆ ನೆರವು: ಸರ್ಕಾರವ ಸಹ ವಿವಿಧ ಇಲಾಖೆಯ ಮೂಲಕ ರೈತರಿಗೆ ಅನೇಕ ಅನುಕೂಲ ಮಾಡಿಕೊಡುತ್ತಿದೆ. ಆದರೆ, ಬಹಳ ರೈತರಿಗೆ ಸರ್ಕಾರಿ ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದ ಸೇವೆ ಪಡೆಯಲು ಅಸಾಧ್ಯವಾಗುತ್ತಿದೆ. ಅಧಿಕಾರಿಗಳಿಗೆ ಸಂಪರ್ಕದ ಕೊರತೆಯಿಂದ ಸರ್ಕಾರದ ಕಾರ್ಯಕ್ರಮ ಕೂಡ ಪೂರ್ಣ ಫಲ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸಮಗ್ರ ಕೃಷಿ ಬೆಳವಣಿಗೆಗೆ ಬೇಕಾದ ಅಗತ್ಯ ಮಾರ್ಗದರ್ಶನ, ನೆರವನ್ನು ನಮ್ಮ ಸಂಸ್ಥೆಯ ಮೂಲಕ ಕೊಡಲಾಗುತ್ತಿದೆ ಎಂದರು.
ಯಾಂತ್ರೀಕರಣ ಅಗತ್ಯ: ಅಮೆರಿಕದಂತಹ ದೇಶದಲ್ಲಿ ಪ್ರಗತಿಪರ ದೇಶದಲ್ಲಿ 75 ವರ್ಷದ ಹಿಂದೆಯೇ ಕೃಷಿ ಕಾರ್ಮಿಕರ ಸಮಸ್ಯೆ ಉಂಟಾಗಿತ್ತು. ಆ ಸಮಸ್ಯೆ ಈಗ ನಮಲ್ಲಿ ಕಾಣಿಸುತ್ತಿದೆ. ಆ ದೇಶಗಳಲ್ಲಿ ಸಮಸ್ಯೆಗೆ ಯಾಂತ್ರೀಕರಣದ ಮೂಲಕ ಪರಿಹಾರ ಕಂಡುಕೊಂಡರು. ನಮ್ಮಲ್ಲೂ ಸಹ ಕೃಷಿ ಕಾರ್ಮಿಕರ ಸಮಸ್ಯೆ ನೀಗಿಸಿಕೊಳ್ಳಲು ಯಾಂತ್ರೀಕರಣದ ಉಪಯೋಗ ಪಡೆದುಕೊಳ್ಳುವ ಅಗತ್ಯವಿದೆ ಎಂದರು.
ಇಂದು ಕೃಷಿ ಭೂಮಿ ಹಿಡುವಳಿ ಸಣ್ಣದಾಗುತ್ತಿದೆ. ಇಂತಹ ಸಂದರ್ಭ ಕಡಿಮೆ ಹಿಡುವಳಿಯಲ್ಲಿ ಅತಿ ಹೆಚ್ಚು ಉತ್ಪಾದನೆ ತೆಗೆಯಲು ಅಗತ್ಯವಾದ ವಿವಿಧ ಪದ್ಧತಿ ಅನುಸರಿಸಲು ಅವಕಾಶವಿದೆ. ಅದನ್ನು ರೈತರಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಜೊತೆಗೆ ಹೈನುಗಾರಿಕೆ ಉತ್ತೇಜನ ಕೊಡುತ್ತಿದ್ದೇವೆ ಎಂದು ಹೇಳಿದರು.
ಶ್ಲಾಘನೆ: ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಹಿಳೆಯರು ಜಿಲ್ಲೆಯಲ್ಲಿ 56 ಕೋಟಿ ರುಪಾಯಿಯನ್ನು ಉಳಿತಾಯ ಮಾಡಲಾಗಿದೆ. ನಿತ್ಯ 10-20 ರುಪಾಯಿ ಉಳಿತಾಯ ಇಷ್ಟು ದೊಡ್ಡ ಮೊತ್ತವಾಗಿದೆ ಎಂದ ಅವರು, ಹಾಗೆಯೇ ಸಾಲದ ಮರುಪಾವತಿ ಕೂಡ ಉತ್ತಮವಾಗಿದ್ದು, ಶೇ.99.7ರಷ್ಟಿದೆ. ಇದೊಂದು ಶ್ಲಾಘನೀಯ ಕಾರ್ಯ. ಮುಂದೆಯೂ ಸಹ ಸಂಘಗಳ ಸಭೆಗಳು ನಿರಂತರವಾಗಿ ನಡೆಯಬೇಕು. ಯೋಜನೆಯ ಪೂರ್ಣ ಪ್ರಯೋಜನ ಪಡೆಯಬೇಕು. ಹಣದ ಮರುಪಾವತಿ ಚೆನ್ನಾಗಿ ನಡೆದು ಸಂಘಟನೆ ಬಲಪಡಿಸಬೇಕು. ಇಂದು ಮಹಿಳೆ ಎಚ್ಚೆತ್ತು ಮಹಿಳೆಯಾಗಿದ್ದಾಳೆ. ಮಹಿಳೆ ಪರಿವರ್ತನೆಯಾದರೆ ಇಡೀ ಸಂಸಾರದ ಪರಿವರ್ತನೆಯಾದಂತೆ ಎಂದು ಅಭಿಪ್ರಾಯಪಟ್ಟರು.
ಭಗವಂತನನ್ನು ಪೂಜೆ ಮಾಡದೇ ಇದ್ದರೂ ಪರವಾಗಿಲ್ಲ, ಸತ್ಯ ಧರ್ಮ ಇದೆಯೋ ಅಲ್ಲಿಗೆ ಭಗವಂತ ಬರುತ್ತಾನೆ. ನಮ್ಮ ಬೆನ್ನ ಹಿಂದೆಯೇ ಇರುತ್ತಾನೆ. ಆತನ್ನು ವಿಶೇಷವಾಗಿ ಆಹ್ವಾನಿಸಬೇಕಾಗಿಲ್ಲ. ಇನ್ನು ಮುಂದೆ ಎಲ್ಲರಲ್ಲಿ ಪರಿವರ್ತನೆಗಳಾಗಲಿ, ಸುಖ- ಶಾಂತಿ ನೆಮ್ಮದಿ ಲಭಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸುಧೀರ್ಕುಮಾರ್ ಬಂಟ್ವಾಳ, ಕೆ.ಜಿ. ನಿಂಗಪ್ಪ, ಶ್ರೀನಿವಾಸ್, ಚಂದ್ರಶೇಖರಪ್ಪ, ಎಲ್.ಎಚ್. ಮಂಜುನಾಥ್, ರೇಖಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಯೋಜನೆಯ ಕೃಷಿ ಅಧಿಕಾರಿ ಯೋಗೀಶ್ ನಿರ್ವಹಿಸಿದರು.