ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೈ ಕೊಟ್ಟ ಅಧಿಕಾರಿಗಳು: ಕಿಮ್ಮನೆ ಕಿಡಿ

Rashmi Kasaragodu
Updated On : 18 Jan 2014, 12:27 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.17
120 ಕೋಟಿ ಅಂದಾಜು ವೆಚ್ಚದ ಭದ್ರಾ ನಾಲೆ ಆಧುನೀಕರಣ ಕಾಮಗಾರಿ ಕುರಿತ ಚರ್ಚೆ ನಡೆಯಬೇಕಿತ್ತು. ಆದರೆ, ಭಾರಿ ನೀರಾವರಿ ಇಲಾಖೆಯ ಯಾರೊಬ್ಬರೂ ಹಾಜರಿರಲಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾಗ ಭದ್ರಾ ನಾಲೆ ಆಧುನೀಕರಣ ಯೋಜನೆ ಬಗ್ಗೆ ಮಾಹಿತಿ ನೀಡುವವರೇ ಇಲ್ಲದ್ದನ್ನು ನೋಡಿ ಆಸಮಾಧಾನಗೊಂಡರು.
ಇಲಾಖೆಯ ಉಪ ಸಿಇಓ ಅವರಿಗೆ ದೂರವಾಣಿ ಮೂಲಕ -ನೀವೇನು ಭಾರತದಲ್ಲಿದ್ದೀರೋ, ಎಲ್ಲಿದ್ದೀರಿ? ಇದಕ್ಕೇನು ವಿವರಣೆ ಕೊಡುತ್ತೀರಿ- ಎಂದು ತರಾಟೆಗೆ ತೆಗೆದುಕೊಂಡರು. ಅತ್ತ ಕಡೆಯಿಂದ ವಿವರಣೆ ಬರೆದು ಕಳಿಸುತ್ತೇನೆ ಎಂಬ ಉತ್ತರ ಬಂದಿರಬೇಕು. ಮತ್ತಷ್ಟು ಸಿಟ್ಟುಗೊಂಡ ಕಿಮ್ಮನೆ, ನೀವೇನೂ ಕಳಿಸಿಕೊಡೋದು ಬೇಡ. ನಾವೇ ಆಕ್ಷನ್ ತೆಗೆದುಕೊಳ್ಳುತ್ತೇವೆ ಎಂದು ಕಿಡಿಕಾರಿದರು.
ಜಿಲ್ಲಾಧಿಕಾರಿಯವರತ್ತ ತಿರುಗಿ, ಅವರಿಗೊಂದು ನೋಟೀಸ್ ಕೊಡಿ ಎಂದು ಸೂಚಿಸಿದರು. 24 ಪ್ಯಾಕೇಜಿನ ಭದ್ರಾ ನಾಲೆ ಆಧುನೀಕರಣ ಕಾಮಗಾರಿ ಬಗ್ಗೆ ಮತ್ತೆ ಇಡೀ ಸಭೆಯಲ್ಲಿ ಚರ್ಚೆಯಾಗಲೇ ಇಲ್ಲ.
ಜನ ಹೊಡೀತಾರೆ: ಯಡೂರು-ಸುಳಗೋಡು-ಮಾಸ್ತಿಕಟ್ಟೆ ರಸ್ತೆಯ ಆಯ್ದ ಸ್ಥಳದಲ್ಲಿ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿರುವುದು ಸಚಿವ ಕಿಮ್ಮನೆ ಅವರಿಗೆ ಮತ್ತೆ ಸಿಟ್ಟು ತರಿಸಿತ್ತು.
125 ಲಕ್ಷ ವೆಚ್ಚದ ಈ ಕಾಮಗಾರಿಯಲ್ಲಿ ಇದೂವರೆಗೆ ಖರ್ಚಾಗಿರುವುದು 14.62 ಲಕ್ಷ ಮಾತ್ರ. ಯಾಕೆ ಹೀಗೆ ಎಂದು ಪ್ರಶ್ನಿಸಿದರು. ಗುತ್ತಿಗೆ ಪಡೆದವರು ಕೆಲಸಕ್ಕೆ ಬರುತ್ತಿಲ್ಲ. ಅವರೊಂದಿಗೆ ಚರ್ಚಿಸಿದ್ದೇವೆ. ಅಂತಿಮ ನೋಟೀಸ್ ನೀಡಿದ್ದೇವೆ ಎಂದರು.
ನೀವೇನಾದರೂ ಈ ಸ್ಥಳಕ್ಕೆ ಹೋಗಿದ್ದೀರಾ ಎಂದು ಕಿಮ್ಮನೆ ಪ್ರಶ್ನಿಸಿದಾಗ, ಇಲ್ಲವೆಂಬ ಉತ್ತರ ಬಂತು. ನೀವು ಅಲ್ಲಿಗೆ ಹೋದ್ರೆ ಜನ ಹೊಡದೇಬಿಡ್ತಾರೆ. ನೀವು ಹೋಗೋಲ್ಲ. ನಾವು ಹೋಗಲೇಬೇಕು ಎಂದ ಅವರು, ಕೆಲಸ ಸರಿಯಾಗಿ ನಿರ್ವಹಿಸದ ಕಾರಣದಿಂದ ಈ ಗುತ್ತಿಗೆದಾರ ಬೇರೆ ಕಾಮಗಾರಿಗಳ ಟೆಂಡರ್ ನಲ್ಲಿ ಭಾಗವಹಿಸಿದಂತೆ ಮಾಡಿ. ಇದಕ್ಕೆ ಅವಕಾಶವಿದೆ ಎಂದು ಸಚಿವರು ಸೂಚಿಸಿದರು.
ಇದೇ ಸಭೆಯಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು, ಕಾಮಗಾರಿ ಮುಕ್ತಾಯವಾಗಿರುವ ಡ್ರೈವಿಂಗ್ ಟ್ರ್ಯಾಕ್ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವಂತೆ ಸೂಚಿಸಿದರು. ಸಭೆಯಲ್ಲಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್ಕ್, ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಸಿಇಓ ಸಸಿಕಾಂತ್ ಸೆಂಥಿಲ್, ಎಸ್ಪಿ ಕೌಶಲೇಂದ್ರ ಕುಮಾರ್, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಮತ್ತಿತರರು ಭಾಗವಹಿಸಿದ್ದರು.



ಬಜೆಟ್‌ಗೆ ಪ್ರಸ್ತಾವನೆ


  ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ತ್ವರಿತ
  ರೈಲು ನಿಲ್ದಾಣ ಬಳಿ 100 ಅಡಿ ರಸ್ತೆ ಸಂಪರ್ಕ
  ಹೊರವರ್ತುಲ ರಸ್ತೆ ನಿರ್ಮಾಣ
  ತುಮರಿ ಬ್ಯಾಕೋಡು ಸಂಪರ್ಕ ಸೇತುವೆ
  ನಕ್ಸಲ್ ಪ್ಯಾಕೇಜ್ ಇನ್ನೆರಡು ವರ್ಷ ವಿಸ್ತರಣೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement