ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಾತಿ ಮೀರಿ ಬೆಳೆಯಲು ಪ್ರತಿಯೊಬ್ಬರಿಗೂ ಸಾಧ್ಯ

Rashmi Kasaragodu
Updated On : 18 Jan 2014, 12:27 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.17 ಹಿರಿಯ ಪತ್ರಕರ್ತ ಪಾಟೀಲಿ ಪುಟ್ಟಪ್ಪನವರು ಶುಕ್ರವಾರ ಬೆಕ್ಕಿನಕಲ್ಮಠದಲ್ಲಿ ನಡೆದ  ಗುರುಬಸವ ಸ್ವಾಮಿಯವರ 102ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನದಲ್ಲಿ ಗುರುಬಸವಶ್ರೀ ಪ್ರಶಸ್ತಿ ಸ್ವೀಕರಿಸಿದರು.
ನಾಡಿನ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ ಬೆಕ್ಕಿನ ಕಲ್ಮಠವು ಗುರುಬಸವ ಸ್ವಾಮಿಯವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದೆ. ಮಠದ ಪರವಾಗಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರು ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾಜ ಬದಲಿಸಬೇಕು: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾಟೀಲ್ ಪುಟ್ಟಪ್ಪ, ಬಸವಣ್ಣನವರನ್ನು ಬಾಯ್ತುಂಬ ಹೊಗಳಿದರೆ ಸಾಲದು, ಅವರು ಹೇಳಿದಂತೆ ಸಮಾಜವನ್ನು ಬದಲಿಸಬೇಕು, ಜೀವನ ನಡೆಸಬೇಕು ಎಂದು ಹೇಳಿದರು.
ನಮ್ಮ ದೇಶದಲ್ಲಿ ಎರಡು ಭೂತಗಳು ನಮ್ಮನ್ನು ಕಾಡುತ್ತಿವೆ. ಒಂದು ಜಾತೀಯತೆ, ಮತ್ತೊಂದು ಭ್ರಷ್ಟಾಚಾರ. ಅವೆರಡು ಎಂದು ತೊಲಗುತ್ತವೋ ಅಂದು ಸ್ವತಂತ್ರ ದೇಶದಲ್ಲಿ, ಸ್ವತಂತ್ರಜೀವನ ಆರಂಭಿಸುತ್ತಾರೆ ಎಂದರು.
ಜಾತಿಗಳು ನಮಗೆ ನಾವು ಹುಟ್ಟಿದಾಗಲೇ ಅಂಟಿಕೊಂಡು ಬಂದಿವೆ. ದೇಹದ ಚರ್ಮ ಅಂಟಿದಂತೆ ಅದೇ ರೀತಿ ಜಾತಿಗಳೂ ನಮ್ಮನ್ನು ಅಂಟಿಕೊಂಡಿವೆ. ನಾವು ಜಾತಿಯನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಜಾತಿ ಮೀರಿ ಬೆಳೆಯಲು ಪ್ರತಿಯೊಬ್ಬರಲ್ಲೂ ಸಾಧ್ಯವಿದೆ ಎಂದು ಹೇಳಿದರು.
ಕ್ರಾಂತಿಕಾರಕ: ಬಸವಣ್ಣ ವೈಚಾರಿಕ ಕ್ರಾಂತಿಕಾರಕ. ಅವನ ರೀತಿ ಮತ್ತೊಬ್ಬ ಹುಟ್ಟಿಲ್ಲ, ಹುಟ್ಟೋದೂ ಇಲ್ಲ. ಬಾಯಿ ಇಲ್ಲದವರಿಗೆ ಬಾಯಿ ತಂದುಕೊಟ್ಟರು, ಧ್ವನಿ ಇಲ್ಲದವರಿಗೆ ಧ್ವನಿ ತಂದುಕೊಟ್ಟರು. ಬಸವಣ್ಣನವರು ನಿರ್ಮಾಣ ಮಾಡಿದ ಸಮಾಜದಲ್ಲಿ ಇದು ಸಾಧ್ಯವಾಯಿತು. ಈಗಲೂ ಸಾಧ್ಯವಾಗಬಹುದು ಎಂದರು.
ನಾವುಗಳು ಸತ್ಯವಂತರಾಗಿ ಬದುಕಬೇಕು. ನಾವೆಲ್ಲ ಧನದಾಹಿಗಳಾಗಿದ್ದೇವೆ. ಗುಣ ದಾಹಿಗಳಾಗಿಲ್ಲ. ಹಣ ತೆಗೆದುಕೊಂಡು ಮೇಲೆಕ್ಕೆ ಹೋದವರು ಇದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಹಾಗೆ ಯಾರಾದರೂ ತೆಗೆದುಕೊಂಡು ಹೋಗಿದ್ದರೆ ಅವರನ್ನು ಪೂಜಿಸುತ್ತೇನೆ ಎಂದರು.
ಮನೆ ಖಾಲಿ ಅನಿವಾರ್ಯ: ನಾವೆಲ್ಲಾ ದೇವರ ಮನೆಯ ಬಾಡಿಗೆದಾರರು. ನಾವು ಬಾಡಿಗೆ ಗೃಹದಲ್ಲಿ ಇದ್ದೇವೆ. ಆದರೂ, ನಮ್ಮ ಆಸ್ತಿ, ನಮ್ಮ ಮನೆ ಅನ್ನುತ್ತೇವೆ. ಒಂದು ದಿನ ಮನೆ ಖಾಲಿ ಮಾಡಲೇ ಬೇಕು, ಯಾರೂ ತೆಗೆದುಕೊಂಡು ಹೋಗಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಕೆಲವು ಸ್ವಾಮಿಗಳು ಮಹಿಳೆಯರು ಮಾಡಿಕೊಂಡಂತೆ ಮೇಕಪ್ ಮಾಡಿಕೊಳ್ಳುತ್ತಾರೆ. ಸ್ವಾಮಿಯೊಬ್ಬರು  ಏಡ್ಸ್ ಬಂದು ಸತ್ತರು. ಅವರನ್ನು ಸ್ವಾಮಿಗಳೆನ್ನಬೇಕೆ ಹೇಳಿ ಎಂದು ಸಭೆಯಲ್ಲಿದ್ದವರನ್ನು ಪ್ರಶ್ನಿಸಿದ ಅವರು, ನಮ್ಮ ಬರಹಗಾರರು ರಾಜಕಾರಣಿಗಳಿಗಿಂತ ಭಿನ್ನವಾಗಿಲ್ಲ ಎಂದು ಟೀಕಿಸಿದರು.
ಬರಹಗಾರನಿಗೆ ಚಾರಿತ್ರ್ಯ ಇರಬೇಕು. ಬದುಕು ಮತ್ತು ಬರಹ ಒಂದೇ ಆಗಿರಬೇಕು. ಚಾರಿತ್ರ್ಯಹೀನ ಸ್ವಾಮೀಜಿ, ಲೇಖಕ, ರಾಜಕಾರಣಿಗಳನ್ನು ತಿರಸ್ಕಾರ ಮಾಡಬೇಕು, ಸಮಾಜ ಅಂತಹವರನ್ನು ಬೆಳೆಯಲು ಅವಕಾಶ ನೀಡಬಾರದು ಎಂದರು.
ಅಕ್ಕ ಮಹಾದೇವಿ ಹೆಸರು: ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಡಬೇಕೆಂಬುದು ನನ್ನ ಆಗ್ರಹ. ಈ ಬಗ್ಗೆ ಮುಖ್ಯಮಂತ್ರಿಯವರಿಗೂ ಪತ್ರ ಬರೆದಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಇಂದು ಅರ್ಜಿ ಹಾಕಬೇಕಾಗಿದೆ. ಅದಕ್ಕೂ ಜನ ತಯಾರಿದ್ದಾರೆ. ಪ್ರಶಸ್ತಿಯಲ್ಲಿ ಬಂಗಾರ ಕೊಡುತ್ತಾರೆ. ಬಂಗಾರ ನೀವೇ ಇಟ್ಟುಕೊಳ್ಳಿ, ಪ್ರಶಸ್ತಿ ನಮಗೆ ಕೊಡಿಸಿ ಎನ್ನುವವರೂ ಇದ್ದಾರೆ ಎಂದು ಟೀಕಿಸಿದರು. ಕಾರ್ಯಕ್ರಮದಲ್ಲಿ ಲೇಖಕ ರಂಜಾನ್ ದರ್ಗಾ, ಡಾ. ಮಲ್ಲೇಶ್ ಹುಲುಮನಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement