ಜಿಲ್ಲಾ ಮಕ್ಕಳ ಸಾಹಿತ್ಯ ಕಮ್ಮಟ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲಭವನ ಸೊಸೈಟಿ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ 9 ರಿಂದ 16 ವರ್ಷದೊಳಗಿನ ತಾಲೂಕು ಮಟ್ಟದಲ್ಲಿ ಆಯ್ಕೆಯಾದ ಮಕ್ಕಳು ಹಾಗೂ ನಗರ ಶಾಲಾ ಮಕ್ಕಳಿಗಾಗಿ ಕ್ರಿಯಾತ್ಮಕ ಬರವಣಿಗೆ (ಕಥೆ, ಕವನ, ಪ್ರಬಂಧ) ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟ ಕಾರ್ಯಾಗಾರವನ್ನು ಜನವರಿ 18ರಂದು ಬೆಳಿಗ್ಗೆ 10ಗಂಟೆಗೆ ಹಾಲ್ಕೊಳದ ಸರ್ಕಾರಿ ಬಾಲಮಂದಿರ ಸಂಕೀರ್ಣದಲ್ಲಿರುವ ಸ್ತ್ರೀಶಕ್ತಿ ತಾಲೂಕು ಒಕ್ಕೂಟ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದ ಈ ಕಾರ್ಯಾಗಾರದಲ್ಲಿ ಆಯ್ಕೆಯಾದ ಮಕ್ಕಳನ್ನು ರಾಜ್ಯಮಟ್ಟದ ಸಾಹಿತ್ಯ ಕಮ್ಮಟಕ್ಕೆ ಕಳುಹಿಸಿಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಕುಂದು- ಕೊರತೆ ಸಭೆ
ಶಿವಮೊಗ್ಗ: ಜನವರಿ 19ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಿಎಆರ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಕುಂದು- ಕೊರತೆ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ಪರಿಶಿಷ್ಟ ಜಾತಿ, ಪಂಗಡದವರು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಲೀ, ಇನ್ನಿತರೆ ಯಾವುದೇ ವಿಚಾರಗಳಿದ್ದಲ್ಲಿ ಸಭೆಯಲ್ಲಿ ಮಂಡಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಹೂವಿನ ಕುಂಡ ಮಾರಾಟ
ಶಿವಮೊಗ್ಗ: ತೋಟಗಾರಿಕೆ ಇಲಾಖೆಯು ಇತ್ತೀಚೆಗೆ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಿದ ಹೂವಿನ ಕುಂಡಗಳನ್ನು ಇಲಾಖೆಯ ದರದಲ್ಲಿ ಮಾರಾಟ ಮಾಡಲಿದ್ದು, ಸಾರ್ವಜನಿಕರು ಇದನ್ನು ಕೊಂಡುಕೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.-08182-222794 ಹಾಗೂ ಮೊಬೈಲ್- 9901566659 ಸಂಪರ್ಕಿಸಬಹುದು.
ರಾಜ್ಯಮಟ್ಟಕ್ಕೆ ಉಷಾ ಆಯ್ಕೆ
ಸೊರಬ: ತಾಲೂಕಿನ ಹಿರೇಮಾಗಡಿಯ ಕಿತ್ತೂರು ಚೆನ್ನಮ್ಮ ವಸತಿಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಎಂ. ಉಷಾ ಜನಪದಗೀತೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಿವಮೊಗ್ಗದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾಳೆ.